Kundapra.com ಕುಂದಾಪ್ರ ಡಾಟ್ ಕಾಂ

ಅಜ್ಞಾತವಾಸ ಮುಗಿಸಿ ದಿಲ್ಲಿಗೆ ಮರಳಿದ ರಾಹುಲ್‌ ಗಾಂಧಿ

ಕುಂದಾಪ್ರ ಡಾಟ್ ಕಾಂ ಕಛೇರಿ ವರದಿ

ಹೊಸದಿಲ್ಲಿ: ಕಳೆದ 56 ದಿನಗಳ ಕಣ್ಮರೆಯಾಗಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ದಿಲ್ಲಿಗೆ ವಾಪಸಾಗಿದ್ದಾರೆ. ನಿಗೂಡವಾಗಿ ರಜೆಯಲ್ಲಿ ತೆರಳಿದ್ದ ಕಾಂಗ್ರೆಸ್ ರಾಜಕುವರ ಇಂದು ಬ್ಯಾಂಕಾಕ್‌ನಿಂದ ಥಾಯ್‌ ಏರ್‌ವೇಸ್‌ ಮೂಲಕ ಬೆಳಗ್ಗೆ 11.15ಕ್ಕೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ರಾಹುಲ್ ಅವರನ್ನು ಆಹ್ವಾನಿಸಲು ಕಾಂಗ್ರೆಸ್‌ ಅಧ್ಯಕ್ಷೆಯಾಗಿರುವ ತಾಯಿ ಸೋನಿಯಾ ಗಾಂಧಿ, ಹಾಗೂ ಸಹೋದರಿ ಪ್ರಿಯಾಂಕಾ ಬೆಳಗ್ಗೆ 11 ಗಂಟೆಗೆ ಮೊದಲೇ ರಾಹುಲ್‌ ಗಾಂಧಿಯವರ ತುಘಲಕ್‌ ರಸ್ತೆಯ ನಿವಾಸಕ್ಕೆ ಆಗಮಿಸಿದ್ದರು.

ಫೆ.23ರಂದು ಆರಂಭವಾದ ಬಜೆಟ್‌ ಅಧಿವೇಶನದ ದಿನವೇ ರಾಹುಲ್‌ ಗಾಂಧಿಯ ರಜೆ ವಿಷಯವನ್ನು ಕಾಂಗ್ರೆಸ್‌ ಘೋಷಿಸಿತ್ತು. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಜತೆಗೆ ಅವರ ರಜೆ ಪಡೆದ ಸಮಯದ ಬಗ್ಗೆ ಕಾಂಗ್ರೆಸ್ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇತ್ತೀಚಿನ ಚುನಾವಣೆಗಳಲ್ಲಿ ಸರಣಿ ಸೋಲು, ಪಕ್ಷದ ಭವಿಷ್ಯದ ಬಗ್ಗೆ ಚಿಂತನೆ ನಡೆಸಲು ಹಾಗೂ ಸದ್ಯದಲ್ಲೇ ನಡೆಯಲಿರುವ ಪಕ್ಷದ ಉನ್ನತ ಮಟ್ಟದ ಸಭೆಗೆ ತಯಾರಿ ನಡೆಸುವ ಸಲುವಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಜೆ ಪಡೆದಿದ್ದರು ಎನ್ನಲಾಗಿದೆ. ರಾಹುಲ್‌ ಗೈರು ಹಾಜರಿ ಪಕ್ಷವನ್ನು ತೀವ್ರ ಮುಜುಗರಕ್ಕೆ ಈಡುಮಾಡಿತ್ತು. ಅವರು ಇರುವ ಸ್ಥಳ ಹಾಗೂ ಯಾವಾಗ ವಾಪಸಾಗುತ್ತಾರೆ ಎಂಬ ಪ್ರಶ್ನೆಗಳಿಗೆ ಪಕ್ಷ ಪ್ರತಿನಿತ್ಯ ಉತ್ತರಿಸಬೇಕಾದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಹುಲ್‌ ಆಗಮನದಿಂದ ಪಕ್ಷ ಈಗ ನಿರಾಳವಾಗಿದೆ.

ಚಿತ್ರ: ಇಂಡಿಯನ್ ಎಕ್ಸ್ಪ್ರೆಸ್

Exit mobile version