Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಅಂತರ್‌ ಕಾಲೇಜು ಸಾಫ್ಟ್‌ಬಾಲ್‌ ಪಂದ್ಯಾವಳಿ. ಸೈಂಟ್‌ ಅಲೋಶಿಯಸ್‌, ಆಳ್ವಾಸ್‌ಗೆ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮಂಗಳೂರು ಸೈಂಟ್‌ ಅಲೋಶಿಯಸ್‌ ಕಾಲೇಜು ಪುರುಷರು ಹಾಗೂ ಆಳ್ವಾಸ್‌ ಮೂಡುಬಿದಿರೆ ಮಹಿಳಾ ತಂಡಗಳು ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಅಂತರ್‌ ಕಾಲೇಜು ಸಾಫ್ಟ್‌ಬಾಲ್‌ ಪಂದ್ಯಾವಳಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿವೆ.

ಪುರುಷರ ವಿಭಾಗದಲ್ಲಿ ಆತಿಥೇಯ ಕುಂದಾಪುರ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ದ್ವಿತೀಯ, ಗೋವಿಂದದಾಸ್‌ ಕಾಲೇಜು ಸುರತ್ಕಲ್‌ ತೃತೀಯ ಸ್ಥಾನ ಪಡೆದವು. ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ ದೈಹಿಕ ಶಿಕ್ಷಣ ಕೇಂದ್ರ ತಂಡ ದ್ವಿತೀಯ, ಎಸ್‌ಡಿಎಂ ಉಜಿರೆ ಕಾಲೇಜು ತಂಡ ತೃತೀಯ ಸ್ಥಾನ ಪಡೆದವು.

ಆಳ್ವಾಸ್‌ ಮೂಡುಬಿದಿರೆಯ ಶಾಂಭವಿ ಉತ್ತಮ ಎಸೆತಗಾರ್ತಿ, ಸೈಂಟ್‌ ಅಲೋಶಿಯಸ್‌ ಕಾಲೇಜಿನ ಹಾರೀಸ್‌ ಉತ್ತಮ ಎಸೆತಗಾರ, ಆಳ್ವಾಸ್‌ ಮೂಡುಬಿದಿರೆಯ ಸುಪ್ರಿಯಾ ಉತ್ತಮ ಹಿಡಿತಗಾರ್ತಿ ಮತ್ತು ಬಿ.ಬಿ. ಹೆಗ್ಡೆ ಕಾಲೇಜಿನ ಅಮಿತ್‌ ಉತ್ತಮ ಹಿಡಿತಗಾರ ವೈಯಕ್ತಿಕ ಪ್ರಶಸ್ತಿ ಪಡೆದರು. ವಿಜೇತರಿಗೆ ಶಾಶ್ವತ ಫಲಕ, ಬಿ.ಎಂ. ಸುಕುಮಾರ ಶೆಟ್ಟಿ ರೋಲಿಂಗ್‌ ಶೀಲ್ಡ್‌ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮಾರೋಪದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಮೀನುಗಾರಿಕಾ ಫೆಡರೇಶನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಪಠ್ಯದ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು. ಅಪರೂಪ ಎನಿಸಿರುವ ಸಾಫ್ಟ್‌ಬಾಲ್‌ ಪಂದ್ಯಾವಳಿಯನ್ನು ಪ್ರೋತ್ಸಾಹಿಸುತ್ತಿರುವ ಬಿ.ಬಿ. ಹೆಗ್ಡೆ ಕಾಲೇಜಿನ ಪ್ರಯತ್ನ ಶ್ಲಾಘನೀಯ ಎಂದರು.

ಅಧ್ಯಕ್ಷ ತೆ ವಹಿಸಿದ್ದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಂಚಾಲಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಕಾಲೇಜು ಆರಂಭಗೊಂಡು 6 ವರ್ಷ ಕಳೆದಿದೆ. ಆರಂಭದಿಂದಲೂ ವಿವಿ ಮಟ್ಟದ ಕ್ರೀಡೆ ಆಯೋಜಿದ ಹೆಮ್ಮೆ ನಮಗಿದೆ. ಸಾಫ್ಟ್‌ಬಾಲ್‌ ಪಂದ್ಯಾವಳಿಯನ್ನು ಮೊತ್ತಮೊದಲ ಬಾರಿಗೆ ವಿವಿಗೆ ಪರಿಚಯಿಸಿದ ಕೀರ್ತಿಯೂ ಕಾಲೇಜಿಗೆ ಸಲ್ಲುತ್ತದೆ ಎಂದರು.

ಮಂಗಳೂರು ವಿವಿ ದೈಹಿಕ ಶಿಕ್ಷ ಣ ಶಿಕ್ಷ ಕ ಸಂಘದ ಪದಾಧಿಕಾರಿ ಪ್ರಸನ್ನಕುಮಾರ್‌, ಕಾಲೇಜಿನ ವಿಶ್ವಸ್ಥ ಮಂಡಳಿಯ ಪ್ರಮುಖರಾದ ಸೊಸೈಟಿಯ ಸದಸ್ಯ ಸೊಲೊಮನ್‌ ಸೋನ್ಸ್‌, ಸಂತೋಷ ನಾಯಕ್‌, ಅನಿಲ್‌ ಚಾತ್ರ, ವೇಣುಗೋಪಾಲ ಎನ್‌., ದೈಹಿಕ ಶಿಕ್ಷ ಣ ನಿರ್ದೇಶಕ ರಂಜಿತ್‌, ಭಂಡಾರ್‌ಕಾರ್ಸ್‌ ಕಾಲೇಜು ಪ್ರಿನ್ಸಿಪಾಲ್‌ ಎನ್‌.ಪಿ. ನಾರಾಯಣ ಶೆಟ್ಟಿ, ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್‌ ಜಿ.ಎಂ. ಗೊಂಡ ಉಪಸ್ಥಿತರಿದ್ದರು. ಪ್ರಿನ್ಸಿಪಾಲ್‌ ದೋಮಚಂದ್ರಶೇಖರ್‌ ಸ್ವಾಗತಿಸಿದರು. ಉಪನ್ಯಾಸಕಿ ಅನ್ವಿತಾ ಕಾರ್ಯಕ್ರಮ ನಿರ್ವಹಿಸಿದರು. ಅನಂತ ಪ್ರಭು ವಂದಿಸಿದರು.

Exit mobile version