Site icon Kundapra.com ಕುಂದಾಪ್ರ ಡಾಟ್ ಕಾಂ

ಪ್ರೇರಣಾ ಯುವ ವೇದಿಕೆ: ಪ್ರೇರಣಾ ಪ್ರಣಮ್ಯ 2017 ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ಚಿತ್ತೂರು ಇದರ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಪ್ರೇರಣಾ ಪ್ರಣಮ್ಯ ೨೦೧೭ ನೈಕಂಬ್ಳಿಯ ಹಳೆಯಮ್ಮ ದೈವಸ್ಥಾನ ವಠಾರದಲ್ಲಿ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮ ಉಧ್ಘಾಟಿಸಿದ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಅಧ್ಯಕ್ಷಟಿ. ಶಿವಾನಂದ ಶೆಟ್ಟಿ ಮಾತನಾಡಿ ರಾಜ್ಯದಲ್ಲಿ ಏಕರೂಪ ಶಿಕ್ಷಣ ಜಾರಿಯಾದಾಗ ಮಾತ್ರ ಕನ್ನಡದ ಉಳಿವು ಸಾಧ್ಯ. ಇಲ್ಲವಾದಲ್ಲಿ ಭಾಷೆಯ ಉಳಿವು ಭಾಷಣಕಷ್ಟೆ ಸೀಮಿತ ಆಗಿರುತ್ತದೆ ಎಂದರು.

ರೈತ ದೇಶದ ಆಸ್ತಿ, ಸಂಘ ಸಂಸ್ಥೆಗಳು ಗ್ರಾಮದ ಆಸ್ತಿ. ನಿರಂತರವಾಗಿ ರೈತಪರ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸಿ ಕೊಡುವವರ ಮತ್ತು ಅಗತ್ಯಯುಳ್ಳವರ ನಡುವಿನ ಕೊಂಡಿಯಾಗಿ ಸಂಘ ಸಂಸ್ಥೆಗಳ ಕಾರ್ಯನಿರ್ವಹಿಸಬೇಕು. ಹಾಗೆ ಪ್ರತಿ ಊರಿನಲ್ಲಿ ಆರ್ಥಿಕವಾಗಿ ಕಷ್ಟದಲ್ಲಿರುವ ಪ್ರತಿಭಾವಂತರನ್ನು ಹುಡುಕಿ ಅವರನ್ನು ದತ್ತು ತೆಗೆದುಕೊಂಡು ಭಾರತದ ಸತ್ಪ್ರಜೆಯಾಗಿಸಲು ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ತಗ್ಗರ್ಸೆ, ಚಿತ್ತೂರು ಗ್ರಾಮ ಪಂಚಾಯತ್ ಅದ್ಯಕ್ಷಸಂತೋಷ ಮಡಿವಾಳ, ಪತ್ರಕರ್ತ ವಸಂತ ಗಿಳಿಯಾರ್, ಬಿ.ಜೆ.ಪಿ ಸ್ಥಾಯಿ ಸಮಿತಿ ಅಧ್ಯಕ್ಷರವಿರಾಜ್ ಶೆಟ್ಟಿ ಚಿತ್ತೂರು ಪ್ರೇರಣಾ ಯುವ ವೇದಿಕೆಯ ಅದ್ಯಕ್ಷರಾದ ಚಂದ್ರ ಶೆಟ್ಟಿ ನೈಕಂಬ್ಳಿ ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ನೈಕಂಬ್ಳಿ ಶಾಲೆಯಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಕಾರ್ಯನಿರ್ವಹಿಸಿದ ಸುಮತಿ ಕುಲಾಲ್ ಅವರಿಗೆ ಪ್ರೆರಣಾ ಗುರು ಸಮ್ಮಾನ, ಐರ್ ಬೈಲ್ ಆನಂದ ಶೆಟ್ಟಿಯವರಿಗೆ ಪ್ರೇರಣಾ ಕಲಾ ಸಮ್ಮಾನ, ಶೇಖರ ಶೆಟ್ಟಿ ಕೊಳೂರು ಹಾಗೂ ಬಡಿಯ ಶೆಟ್ಟಿ ಗಾಂದಾಡಿ ಇವರುಗಳಿಗೆ ಪ್ರೇರಣಾ ಹಿರಿಯ ನಾಗರೀಕ ಸಮ್ಮಾನ ನೀಡಿ ಗೌರವಿಸಲಾಯಿತು.

ಕಾರ್ಯದರ್ಶಿ ನಾಗರಾಜ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘಟನಾ ಕಾರ್ಯದರ್ಶಿ ದಿನೇಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಉದಯ ಆಚಾರ್ಯ ನಿರೂಪಿಸಿ, ಸುಪ್ರತ್ ಶೆಟ್ಟಿ ವಂದಿಸಿದರು. ವೇದಿಕೆಯ ಸದಸ್ಯರು ಹಾಗೂ ಊರಿನವರಿಂದ ರಾಮಾಶ್ವಮೇಧ ಯಕ್ಷಗಾನ ಜರುಗಿತು.

ನಾಲ್ಕನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಪ್ರೇರಣಾ ಪ್ರಣಮ್ಯ ಕಸ ಮುಕ್ತ ಮಾರಣಕಟ್ಟೆ ಜಾತ್ರೆ ನಿಟ್ಟಿನಲ್ಲಿ ಕಟ್ಟಿದ ಜಾಗೃತಿ ಬ್ಯಾನರ್, ಇರಿಸಿದ್ದ ಕಸದಬುಟ್ಟಿ ಸ್ವಚ್ಛ ಜಾತ್ರೆಗೆ ಇಂಬುಕೊಟ್ಟಿತು . ಅಂತರ ಶಾಲಾ ಮಟ್ಟದ ಪ್ರೇರಣಾ ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಕೊಲ್ಲೂರು, ಜಡ್ಕಲ್, ಹೊಸೂರು, ಆಲೂರು ನೈಕಂಬ್ಳಿ ,ಬೆಳ್ಳಾಲ , ಇಡೂರು ಮುಂತಾದ ಶಾಲೆಗಳಿಂದ ಮುನ್ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ವೇದಿಕೆ ವತಿಯಿಂದ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಸುಮಾರು ಐವತ್ತಕ್ಕು ಮಿಕ್ಕಿ ಅರ್ಹರಿಗೆ ಕನ್ನಡಕ ವಿತರಿಸಲಾಯಿತು.

Exit mobile version