Kundapra.com ಕುಂದಾಪ್ರ ಡಾಟ್ ಕಾಂ

ಕೆ. ವಿ. ಅಕ್ಷರಗೆ 2017ನೇ ಸಾಲಿನ ರಂಗಮನೆ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಸುಳ್ಯದ ರಂಗಮನೆ ರಿ. ಸಾಂಸ್ಕೃತಿಕ ಕಲಾ ಕೇಂದ್ರವು ಕೊಡಮಾಡುವ 2017ರ ರಂಗಮನೆ ಪ್ರಶಸ್ತಿಯನ್ನು ಪ್ರಸಿದ್ಧ ರಂಗ ಶಿಕ್ಷಕ, ರಂಗವಿಮರ್ಶಕ, ನಾಟಕಕಾರ ಹಾಗೂ ಪ್ರಕಾಶಕರಾದ ಕೆ. ವಿ. ಅಕ್ಷರ ಅವರಿಗೆ ನೀಡಲಾಗುವುದೆಂದು ರಂಗ ನಿರ್ದೇಶಕ, ರಂಗಮನೆ ರೂವಾರಿ ಜೀವನ್‌ರಾಂ ಸುಳ್ಯ ತಿಳಿಸಿದ್ದಾರೆ.

ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಕೆ.ವಿ.ಸುಬ್ಬಣ್ಣರವರ ಪುತ್ರರಾದ ಅಕ್ಷರ ಅವರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಪದವಿ ಹಾಗೂ ಅಮೇರಿಕಾದ ಲೀಡ್ಸ್ ವಿಶ್ವ ವಿದ್ಯಾಲಯದ ರಂಗಶಾಲೆಯಿಂದ ಸ್ನಾತಕೋತ್ತರ ಎಂ.ಎ ಪದವಿಯನ್ನು ಪಡೆದವರು.

ನೀನಾಸಂ ರಂಗಶಿಕ್ಷಣ ಕೇಂದ್ರದ ರಂಗಶಿಕ್ಷಕರಾಗಿ, ನಿರ್ದೇಶಕರಾಗಿ, ನೂರಾರು ರಂಗಪ್ರತಿಭೆಗಳನ್ನು ನಾಡಿಗೆ ನೀಡಿದವರು. ಕನ್ನಡದ ಪ್ರಸಿದ್ಧ ಪುಸ್ತಕ ಪ್ರಕಾಶನ ಅಕ್ಷರ ಪ್ರಕಾಶನದ ಮೂಲಕ ಅನೇಕ ಅಮೂಲ್ಯ ಪುಸ್ತಕಗಳನ್ನು ಹೊರತಂದವರು. ಸ್ವತಃ ನಾಟಕಕಾರರಾಗಿ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಸ್ಕೃತಿ ಹಾಗೂ ಅನುವಾದಕ್ಕೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದವರು.

ನೀನಾಸಂ ಬಳಗ, ನೀನಾಸಂ ತಿರುಗಾಟ ಮುಂತಾದ ತಂಡಕ್ಕೆ ಸ್ಮಶಾನ, ಕುರುಕ್ಷೇತ್ರ, ಅಹಲ್ಯಾ, ನೀಲಿ ಕುದುರೆ, ಕಿರಗೂರಿನ ಗಯ್ಯಾಳಿಗಳು, ತುಘಲಕ್, ಸಂಗ್ಯಾ ಬಾಳ್ಯಾ, ಸ್ವಪ್ನನಾಟಕ ಮುಂತಾಗಿ ೫೦ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ ಕನ್ನಡ ರಂಗಭೂಮಿಗೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಇವರ 3 ಕೃತಿಗಳಿಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಕರ್ನಾಟಕ ನಾಟಕ ಅಕಾಡಮಿ ಫೆಲೋಶಿಪ್ ಗೌರವ, ವಿ.ಎಂ.ಇನಾಂದರ್ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಸನ್ಮಾನಗಳು ಇವರಿಗೆ ದೊರಕಿವೆ.

ಫೆಬ್ರವರಿ 3,4,5 ರಂದು ಸುಳ್ಯದ ರಂಗಮನೆಯಲ್ಲಿ ನಡೆಯುವರಂಗಸಂಭ್ರಮ -2017 ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವದ ಸಮಾರೋಪದಲ್ಲಿ ರಂಗಮನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ಹತ್ತು ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ ಎಂದು ಜೀವನ್‌ರಾಂ ಸುಳ್ಯ ತಿಳಿಸಿದ್ದಾರೆ.

Exit mobile version