Kundapra.com ಕುಂದಾಪ್ರ ಡಾಟ್ ಕಾಂ

ಮೌಲ್ಯಯುತ ಹಾಗೂ ವ್ಯಕ್ತಿತ್ವ ವಿಕಸನದ ಶಿಕ್ಷಣ ದೊರಕಿಸುವುದು ಕುಸುಮಾ ಫೌಂಡೇಶನ್ ಉದ್ದೇಶ: ನಳಿನ್ ಕುಮಾರ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಆಚರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಕುಸುಮಾ ಫೌಂಡೇಶನ್ ಮೂಲಕ ಮುಂಬೈ ಉದ್ಯಮಿ ಲಕ್ಷ್ಮಣ ಪೂಜಾರಿ ಸುಮಾರು ೧.೫ಲಕ್ಷ ರೂ. ವೆಚ್ಚದಲ್ಲಿ ಈ ಶಾಲೆಗೆ ನಿರ್ಮಿಸಿಕೊಟ್ಟ ಎರಡು ತರಗತಿ ಕೋಣೆಗಳನ್ನು ಸುಂದರ ದೇವಾಡಿಗ, ಹಳಗೇರಿ ಕೆಳಾಮನೆ ಅಬ್ಬಕ್ಕ ಶೆಟ್ಟಿ ಸ್ಮರಣಾರ್ಥ ಮಕ್ಕಳು ಸುಮಾರು ೧.೫ಲಕ್ಷ ರೂ. ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಸುಸಜ್ಜಿತ ಗ್ರಂಥಾಲಯವನ್ನು ಪ್ರಭಾಕರ ಶೆಟ್ಟಿ ಮತ್ತು ವಿಲಾಸಿನಿ ಶೆಟ್ಟಿ ದಂಪತಿಗಳು ಹಾಗೂ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಒದಗಿಸಲು ಮಾಡಿದ ಕಂಪ್ಯೂಟರ್ ಲ್ಯಾಬ್‌ನ್ನು ಕಿರಿಮಂಜೇಶ್ವರ ಗ್ರಾಪಂ ಸದಸ್ಯ ಈಶ್ವರ ದೇವಾಡಿಗ ಶಾಲೆಗೆ ಹಸ್ತಾಂತರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಾಗೂರು ಕುಸುಮಾ ಫೌಂಡೇಶನ್ ಆಡಳಿತ ನಿರ್ದೇಶಕ ನಳಿನ್ ಕುಮಾರ್ ಶೆಟ್ಟಿ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಸರ್ಕಾರದ ಮಾನದಂಡ ಹಾಗೂ ಪಾಲಕರ ಆಂಗ್ಲ ವ್ಯಾಮೋಹದಿಂದ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಇಂದು ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳೇ ಪೈಪೋಟಿ ನೀಡುತ್ತಿರುವುದು ಹೆಮ್ಮಯ ವಿಷಯವಾಗಿದೆ ಎಂದರು.

೮೫ ವರ್ಷಗಳ ಇತಿಹಾಸವಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಮೌಲ್ಯಯುತ ಹಾಗೂ ಭಾವನಾತ್ಮಕ ವ್ಯಕ್ತಿತ್ವ ವಿಕಸನದ ಶಿಕ್ಷಣ ಸಿಗುವಂತಾಗಬೇಕು ಎಂಬ ನೆಲೆಯಲ್ಲಿ ಕುಸುಮಾ ಫೌಂಡೇಶನ್ ಒಂದು ಮಾಧ್ಯಮವಾಗಿ ಕಳೆದ ಮೂರು ವರ್ಷದ ಹಿಂದೆ ಈ ಶಾಲೆಯನ್ನು ದತ್ತು ಪಡೆದು ಮಕ್ಕಳಿಗೆ ಎಲ್ಲಾ ಮೂಲಸೌಕರ್ಯಗಳನ್ನು ನೀಡುತ್ತಿದೆ. ಪ್ರತಿ ವರ್ಷ ಮಕ್ಕಳ ದಾಖಲಾತಿ ಸಂಖ್ಯೆ ಏರುತ್ತಿರುವುದು ಕೂಡಾ ಇದಕ್ಕೆ ಕಾರಣವಾಗಿದೆ. ಇಲ್ಲಿರುವ ಶಿಕ್ಷಕರ ಪ್ರಾಮಾಣಿಕ ಪ್ರಯತ್ನ, ದಾನಿಗಳಿಂದ ಹಾಗೂ ಹಳೆವಿದ್ಯಾರ್ಥಿಗಳಿಂದ ಕೂಡಾ ಧನಾತ್ಮಕ ಸ್ಪಂದೆನೆ ದೊರಕುತ್ತಿದ್ದು, ಶಾಲೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಭಾಗೀರಥಿ ಅಧ್ಯಕ್ಷತೆವಹಿಸಿದ್ದರು. ಸಿಆರ್‌ಪಿ ಬಂಗ್ಲೆ ನಾಗರಾಜ, ವಿದ್ಯಾರ್ಥಿ ನಾಯಕ ಲೋಕೇಶ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಗುರುರಾಜ್ ರಾವ್ ಸ್ವಾಗತಿಸಿ, ಪ್ರಾಸ್ತಾವಿಸಿದರು. ಮರ್ಲಿ ಮೊಗವೀರ ನಿರೂಪಿಸಿ, ಫರ್ನಾಜ್, ಚೈತನ್ಯ ಸಹಕರಿಸಿದರು. ಸುಜಾತಾ ಕುಮಾರಿ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Exit mobile version