ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಸಿಡುಬು, ದಡಾರ ರೋಗಕ್ಕಿಂತ ಹೆಚ್ಚು ಅಪಾಯಕಾರಿಯಾಗಿರುವ ರುಬೆಲ್ಲಾ ರೋಗವನ್ನು ನಿಯಂತ್ರಿಸಲು ಸರಕಾರ ಫೆಬ್ರವರಿ ೭ರಿಂದ ಮಾರ್ಚ್ ೧ರವರೆಗೆ ಮಕ್ಕಳಿಗೆ ಚುಚ್ಚುಮದ್ದು ನೀಡುವ ಕಾರ್ಯಕ್ರಮ ನಡೆಸುತ್ತಿದೆ. ೯ ತಿಂಗಳಿನಿಂದ ೧೫ ವರ್ಷದ ಎಲ್ಲಾ ಮಕ್ಕಳಿಗೆ ಸಿಡುಬು ರೋಗ, ದಡಾರ ಹಾಗೂ ಮಾರಣಾಂತಿಕ ರುಬೆಲ್ಲಾ ರೋಗವನ್ನು ನಿಯಂತ್ರಿಸುವ ಚುಚ್ಚುಮದ್ದನ್ನು ಕಡ್ಡಾಯವಾಗಿ ಹಾಕಿಸಬೇಕು. ಈ ಹಿಂದೆ ಮಕ್ಕಳಿಗೆ ಈ ಚುಚ್ಚುಮದ್ದನ್ನು ಹಾಕಿಸಿದ್ದರೂ ಪುನ: ಇದನ್ನು ನೀಡಬೇಕು ಎಂದು ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ವೇತಾ ಹೇಳಿದರು.
ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಪೋಷಕರಿಗಾಗಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಿಸೆಲ್ಸ್ ಮತ್ತು ರುಬೆಲ್ಲಾ ರೋಗದ ಚುಚ್ಚುಮದ್ದಿನಿಂದ ಮಕ್ಕಳ ಮೇಲೆ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ ಮತ್ತು ಪ್ರತಿ ಪರಿಣಾಮ ಆಗುವ ಯಾವುದೇ ಭಯ ಬೇಡ. ಈ ಚುಚ್ಚುಮದ್ದು ಮಕ್ಕಳ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರತಿಯೊಂದು ಅಂಗನವಾಡಿ, ಶಾಲಾ ಕಾಲೇಜುಗಳಲ್ಲಿ ಚುಚ್ಚುಮದ್ದು ಹಾಕಲು ಶಿಬಿರಗಳನ್ನು ಆಯೋಜಿಸಲಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿದಿನ ಬೆಳಿಗ್ಗೆ ಚುಚ್ಚುಮದ್ದು ಹಾಕುವ ಕಾರ್ಯಕ್ರಮ ನಡೆಯಲಿದೆ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ತಪ್ಪದೇ ಮಿಸೆಲ್ಸ್ ಮತ್ತು ರುಬೆಲ್ಲಾ ಚುಚ್ಚುಮದ್ದನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದರು.
ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಶೇರುಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಶಿಕ್ಷಕ ರಕ್ಷಕ ಸಮಿತಿ ಉಪಾಧ್ಯಕ್ಷ ಬಿ.ರಾಘವೇಂದ್ರ ಪೈ ಉಪಸ್ಥಿತರಿದ್ದರು. ಶಾಲೆಯ ಸಹಶಿಕ್ಷಕಿ ಸುಜಾತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.