Kundapra.com ಕುಂದಾಪ್ರ ಡಾಟ್ ಕಾಂ

ಸ್ವಾಮಿ ವಿವೇಕಾನಂದರ ಚಿಂತನೆಯಂತೆ ಭಾರತ ಹೊಸ ದಿಕ್ಕಿನತ್ತ ಸಾಗುತ್ತಿದೆ: ಚಕ್ರವರ್ತಿ ಸೂಲಿಬೆಲೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತವಿಲ್ಲದೇ ಬದುಕಲು ಸಾಧ್ಯವಿಲ್ಲ ಎಂದು ಜಗತ್ತಿಗೆ ಅರಿವಾಗಿದೆ. ಅಂತಹ ವಿಶೇಷ ಪ್ರಭೆಯೊಂದನ್ನು ಸ್ವಾಮಿ ವಿವೇಕಾನಂದರು ಹರಿಸಿದ್ದಾರೆ. ಅವರ ೧೫೪ನೇ ಜನ್ಮದಿನಾಚರಣೆಯ ಸಂದಭದಲ್ಲಿ ಭಾರತ ಹೊಸ ದಿಕ್ಕಿನತ್ತ ಸಾಗುತ್ತಿದ್ದು, ಅಂದು ಕಂಡ ಕನಸು ನನಸಾಗುತ್ತಿದೆ ಎಂದು ಖ್ಯಾತ ವಾಗ್ಮಿ, ಅಂಕಣಗಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಅವರು ಸಮರ್ಥ ಭಾರತ ಬೈಂದೂರು ಆಶ್ರಯದಲ್ಲಿ ಶನಿವಾರ ನಡೆದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ೧೫೪ನೇ ಜನ್ಮದಿನಾಚರಣೆ ’ವಿವೇಕ ಪರ್ವ’ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು. ನೂರಾರು ವರ್ಷಗಳಿಂದ ಈ ದೇಶ ಪರಕೀಯರಿಂದ ಆಕ್ರಮಣಕ್ಕೀಡಾದರೂ ಇಂದಿಗೂ ತನ್ನ ‘ವ್ಯ ಇತಿಹಾವನ್ನು ಕಾಪಾಡಿಕೊಂಡು ಬಂದಿದೆ. ಪರಕೀಯ ಆಕ್ರಮಣದಿಂದ ನಮ್ಮ ಸಂಪತ್ತು ಲೂಟಿಯಾದ ಬಗ್ಗೆ ಯೋಚನೆ ಮಾಡುವುದಿಲ್ಲ, ಆದರೆ ೭೦ ವರ್ಷಗಳಿಂದ ದೇಶದ ಸಂಪತ್ತನ್ನು ಈ ದೇಶದ ನಾಯಕರೇ ಲೂಟಿ ಮಾಡಿದ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದ ಅವರು ದೇಶದ ಮೇಲಾದ ಸಾಂಸ್ಕೃತಿಕ ಆಕ್ರಮಣಗಳು ಸಾಮಾನ್ಯವಾದುದಲ್ಲ. ನಮ್ಮ ವೇಶಭೂಷಣ, ಊಟ ತಿಂಡಿ, ಮಾತು ಬದಲಾಗುವಂತಾಯಿತು. ಆದರೆ ಎಲ್ಲವನ್ನೂ ಮೀರಿ ದೇಶ ಅಖಂಡತೆಯತ್ತ ಸಾಗುತ್ತಿರುವುದಲ್ಲದೇ ವಿಶ್ವಗುರುವಾಗುತ್ತಿದೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಚಾಲಕ ಡಾ. ವಾಮನ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬರು ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿ ತಾನು ಬೆಳೆಯಬೇಕು ಎಂಬ ಉದಾತ್ತ ಚಿಂತನೆ ಹಿಂದೂ ಧರ್ಮದಲ್ಲಿದೆ. ಯಾವ ವ್ಯಕ್ತಿ ಅನ್ಯರಿಗಾಗಿ ಬದುಕುತ್ತಾನೋ ಆತ ಸತ್ತ ಮೇಲೂ ಬದುಕಿರುತ್ತಾನೆ. ಯುವ ಜನಾಂಗದಿಂದ ಜನಾಂಗದವರಿಂದ ಉತ್ತಮ ಕೆಲಸ ಕಾರ್ಯಗಳು ನಡೆದಾದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ ಎಂದರು.

ಸಮರ್ಥ ಭಾರತ ಬೈಂದೂರು ಘಟಕದ ಗೌರವಾಧ್ಯಕ್ಷ ವಿಶ್ವೇಶ್ವರ ಅಡಿಗ, ಕಾರ್ಯದರ್ಶಿ ಪ್ರದೀಪ ಕುಮಾರ ಶೆಟ್ಟಿ, ಸಹ ಕಾರ್ಯದರ್ಶಿಗಳಾದ ವಿಜಯ ಕುಮಾರ್, ಪ್ರಿಯದರ್ಶಿನಿ ದೇವಾಡಿಗ, ಸಂಚಾಲಕ ಶ್ರೀಧರ ಬಿಜೂರು, ಸಹ ಸಂಚಾಲಕ ಭೀಮೇಶ್ ಕುಮಾರ ಎಸ್. ಜಿ., ಮಾಜಿ ಶಾಸಕರಾದ ಅಪ್ಪಣ್ಣ ಹೆಗ್ಡೆ, ಕೆ. ಲಕ್ಷ್ಮೀನಾರಾಯಣ ಹಾಗೂ ಸಮರ್ಥ ಭಾರತದ ಉಪಾಧ್ಯಕ್ಷರುಗಳು ಉಪಸ್ಥಿತರಿದ್ದರು.

ಸಮರ್ಥ ಭಾರತ ಬೈಂದೂರು ಘಟಕದ ಕಾರ್ಯಾಧ್ಯಕ್ಷ ಜಯಾನಂದ ಹೋಬಳಿದಾರ್ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ ವಂದಿಸಿದರು, ಆರ್ ಜೆ ನಯನ ನಿರೂಪಿಸಿದರು. ಸಮಾವೇಶಕ್ಕೂ ಮುನ್ನ ಬೈಂದೂರು ಯಡ್ತರೆ ವೃತ್ತದಿಂದ ಗಾಂಧಿ ಮೈದಾನದವರೆಗೆ ಸ್ವಾಮಿ ವಿವೇಕಾನಂದರ ದಿವ್ಯಮೂರ್ತಿ ಹಾಗೂ ಕಲಾತಂಡದೊಂದಿಗೆ ಭವ್ಯ ಮೆರವಣೆಗೆ ನಡೆಯಿತು. ಮೂರ್ತಿ ಬೈಂದೂರು ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

► ಸಮರ್ಥ ಭಾರತ ಬೈಂದೂರು ಆಯೋಜಿಸಿದ ವಿವೇಕ ಪರ್ವ ಬೃಹತ್ ಸಮಾರಂಭದಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತುಗಳು ಕೇಳಿ http://kundapraa.com/viveka-parva-live/ .

ಚಿತ್ರಗಳು: ತಿಮ್ಮಪ್ಪ, ಸುಶೀಲ್ ಸ್ಟುಡಿಯೋ

ಚಿತ್ರಗಳು: ಸುಶಾಂತ್ ಆಚಾರ್ಯ

Exit mobile version