Kundapra.com ಕುಂದಾಪ್ರ ಡಾಟ್ ಕಾಂ

ನಾಟಕದಿಂದ ಸಮಾಜ ಹಾಗೂ ಸುತ್ತಲಿನ ಭೌದ್ದಿಕ ಸ್ಥಿತಿಯ ಅರಿವು: ಪ್ರದೀಪ್ ಶೆಟ್ಟಿ ಕೆಂಚನೂರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಂಗಭೂಮಿ ರೀತಿಯ ಕಲಾಪ್ರಕಾರಗಳು ಸಮಾಜಕ್ಕೆ ಬಹುಮುಖ್ಯದುದು. ಮನುಷ್ಯ, ಸಮುದಾಯ, ಭಾಷೆ ಮುಂತಾದವುಗಳ ನಡುವಿನ ಅರ್ಥೈಸುವಿಕೆಗೆ ನಾಟಕ ಪ್ರಮುಖ ಮಾಧ್ಯಮವಾಗಿದೆ. ನಾಟಕ ಕೇವಲ ನಟನೆ ಮಾತ್ರವೇ ಆಗಿ ಉಳಿಯದೇ ನಟನೊಬ್ಬ ತನ್ನನ್ನು ತಾನು ಅರಿತುಕೊಳ್ಳುವ, ಸಮಾಜವನ್ನು; ಸುತ್ತಲಿನ ಭೌದ್ದಿಕ ಸ್ಥಿತಿಯನ್ನು ಅರಿಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪ್ರದೀಪ್ ಶೆಟ್ಟಿ ಕೆಂಚನೂರು ಹೇಳಿದರು.

ಅವರು ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ 40ಸಂಭ್ರಮದ ಅಂಗವಾಗಿ ಆಯೋಜಿಸಿದ ರಂಗಲಾವಣ್ಯ 2017 ಕಲಾಮಹೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಶುಭಶಂಸನೆಗೈದರು. ಎಪ್ಪತ್ತರ ದಶಕದ ನಂತರದ ರಾಜಕೀಯ ವ್ಯವಸ್ಥೆಗಳು ಸಮಾಜದ ಜನರ ಮಾನಸಿಕ, ಭೌದಿಕ ಹಾಗೂ ಸೃಜನಶೀಲತೆಯನ್ನು ನಾಶಮಾಡಿವೆ. ರಂಗಭೂಮಿಯಲ್ಲಿನ ವ್ಯಕ್ತಿಗಳು ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯನ್ನು ವಿರೋಧ ಪಕ್ಷದ ರೀತಿಯಲ್ಲಿ ನೋಡುವ ದೃಷ್ಠಿಕೋನವಿದ್ದರೆ ಸಮಾಜ ಸ್ವಾಸ್ಥ್ಯ ಕಾಪಾಡಲು ಸಾಧ್ಯವಿದೆ ಎಂದ ಅವರು, ಕ್ರೀಯಾಶೀಲ ಚಟುವಟಿಕೆಗಳು ಇಲ್ಲದೇ ಹೋದರೆ ಸಮಾಜ ಬೇಗನೆ ಬಿದ್ದು ಹೋಗುತ್ತದೆ. ಸಮುದಾಯ ಹಾಗೂ ವ್ಯಕ್ತಿಗಳ ನಡುವೆ ಸಮನ್ವಯತೆ ಸಾಧಿಸುವ ನಗರಗಳು ಹಿನ್ನೆಲೆಯಲ್ಲಿ ಸಾಂಸ್ಕೃತಿಕವಾಗಿ ಬಲಿಷ್ಠವಾಗಿವೆ ಎಂದರು.

ಬೆಂಗಳೂರು ಮೇ| ಚಿತ್ತಾರಿ ಡೆವಲಪ್ಪರ‍್ಸ್‌ನ ಸುಖಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ, ಹಿರಿಯ ಕಲಾವಿದ ಬಿ. ಮಾಧವ ರಾವ್, ತೆರಿಗೆ ಸಲಹೆಗಾರ ಜತೀಂದ್ರ, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ವೆಂಕಟ ಪೂಜಾರಿ ಸಸಿಹಿತ್ಲು, ಯಡ್ತರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜ ಶೆಟ್ಟಿ, ಲಾವಣ್ಯ ಬೈಂದೂರು ಗೌರವಾಧ್ಯಕ್ಷ ಶ್ರೀನಿವಾಸ ಪ್ರಭು, ಅಧ್ಯಕ್ಷ ಗಿರೀಶ್ ಬೈಂದೂರು, ಉತ್ಸವ ಸಮಿತಿ ಕಾರ್ಯದರ್ಶಿ ನಾರಾಯಣ ಕೆ. ಮೊದಲಾದವರು ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರನ್ನು ಗೌರವಿಸಲಾಯಿತು. ಲಾವಣ್ಯ ಕಲಾವಿದರಾದ ಮಹೇಶ್ ನಾಯಕ್, ತ್ರಿವಿಕ್ರಮ್ ರಾವ್ ಉಪ್ಪಂದ, ಬಾಬು ಟೈಲರ್, ಗಣೇಶ್ ಪರಮಾನಂದ, ರೋಶನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಲಾವಣ್ಯ ಸದಸ್ಯ ಗಣೇಶ್ ಗಾಣಿಗ ತಗ್ಗರ್ಸೆ ಸನ್ಮಾನಿತರ ಪರಿಚಯ ವಾಚಿಸಿದರು. ಉತ್ಸವ ಸಮಿತಿ ಅಧ್ಯಕ್ಷ ಸದಾಶಿವ ಡಿ. ಪಡುವರಿ ಸ್ವಾಗತಿಸಿದರು. ಲಾವಣ್ಯದ ಪ್ರಧಾನ ಕಾರ್ಯದರ್ಶಿ ಮೋಹನ ಕಾರಂತ್ ವಂದಿಸಿದರು. ಕೋಶಾಧ್ಯಕ್ಷ ನಾಗರಾಜ ಪಿ. ಯಡ್ತರೆ ಕಾರ್ಯಕ್ರಮ ನಿರೂಪಿಸಿದರು.

 

Exit mobile version