Kundapra.com ಕುಂದಾಪ್ರ ಡಾಟ್ ಕಾಂ

ಡಾ. ಹೆಚ್ ಶಾಂತಾರಾಮ ಅವರಿಗೆ ಕೋ. ಮ ಕಾರಂತ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉತ್ತಮ ಸಾಧನೆಗೈದ, ಪ್ರತಿಭಾವಂತ ಜನರ ಒಡನಾಟ ಜೀವನದಲ್ಲಿ ಮುನ್ನಡೆಗೆ ಬಹಳ ಪ್ರೇರಣೆ ನೀಡುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. ಉತ್ತಮ ವಾಗ್ಮಿ, ಚಿಂತಕ, ಪತ್ರಕರ್ತ, ಬ್ಯಾಂಕರ್, ಮಾರ್ಗದರ್ಶಕರಾಗಿದ್ದ, ಕೋಣಿ ಮಹಾಬಲೇಶ್ವರ ಕಾರಂತರು ನೀಡಿದ ತರಬೇತಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೊಂದಿಗೆ ಸೇವೆ ಸಲ್ಲಿಸುವ ಸಾಮರ್ಥ್ಯ, ಆತ್ಮವಿಶ್ವಾಸ ಒದಗಿಸಿತು. ಕೋ.ಮ.ಕಾರಂತ ಹೆಸರಲ್ಲಿ ಇಂದು “ಕುಂದಪ್ರಭದಿಂದ ಪ್ರಶಸ್ತಿ ಪಡೆಯುತ್ತಿರುವ ಡಾ.ಹೆಚ್.ಶಾಂತಾರಾಮರು ಮಣಿಪಾಲ, ಉಡುಪಿ, ಕುಂದಾಪುರ ಸೇರಿದಂತೆ ಬಹಳ ಕಡೆ ಶೈಕ್ಷಣಿಕ, ಸಾಮಾಜಿಕ , ಹಾಗೂ ಕಲಾಕ್ಷೇತ್ರಗಳಲ್ಲಿ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿ ೮೯ರ ಹರೆಯದಲ್ಲೂ ಕ್ರಿಯಾಶೀಲರಾಗಿರುವವರು. ಇವರ ಒಡನಾಟದಿಂದ ಸಾವಿರಾರು ಮಂದಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಅಪೂರ್ವ ಸಮಾರಂಭದಿಂದ ವಿದ್ಯಾರ್ಥಿಗಳು ಸ್ಫೂರ್ತಿ ಪ್ರೇರಣೆ ಪಡೆಯಬೇಕು ಎಂದು ಭಾರತ ಸರಕಾರದ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆಯ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಪ್ರಕಾಶರಾವ್ ಹೇಳಿದರು.

ಕುಂದಪ್ರಭ ಸಂಸ್ಥೆಯ ಆಶ್ರಯದಲ್ಲಿ ಕುಂದಾಪುರದ ಭಂಡಾರ್‌ಕಾರ‍್ಸ್ ಕಾಲೇಜಿನ ವಠಾರದಲ್ಲಿ ನಡೆದ ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಧಾನ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ವಹಿಸಿದ್ದರು.

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ ದೀಪ ಬೆಳಗಿಸಿ ಕುಂದಕಲಾ ಉತ್ಸವ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಉದ್ಯಮಿ ದತ್ತಾನಂದ ಗಂಗೊಳ್ಳಿ, ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲಾ ಸಂಚಾಲಕ ಕೆ.ರಾಧಾಕೃಷ್ಣ ಶೆಣೈ, ಭಂಡಾರ್‌ಕಾರ‍್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ. ನಾರಾಯಣ ಶೆಟ್ಟಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿದರು.

ಭಂಡಾರ್‌ಕಾರ‍್ಸ್ ಕಾಲೇಜಿನ ವಿಶ್ವಸ್ಥರಾದ ಕೆ.ಶಾಂತಾರಾಮ ಪ್ರಭು , ಕೆ.ದೇವದಾಸ ಕಾಮತ್, ಎಸ್. ಸದಾನಂದ ಚಾತ್ರ, ಆಡಳಿತ ಮಂಡಳಿ ಸದಸ್ಯರಾದ ಡಾ|ರಂಜಿತ ಕುಮಾರ್ ಶೆಟ್ಟಿ, ಗಂಗೊಳ್ಳಿಯ ಹಿರಿಯ ಉದ್ಯಮಿ ಎಚ್. ಗಣೇಶ ಕಾಮತ್, ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ದೋಮ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ| ಎಚ್. ಶಾಂತಾರಾಮ್ “ನಾನು ಒತ್ತಾಯಕ್ಕೆ ಕುಂದಾಪುರಕ್ಕೆ ಬಂದಿದ್ದೆ. ಬಂದ ಮೇಲೆ ನನ್ನ ಕರ್ತವ್ಯ ನಿರ್ವಹಿಸಿದೆ. ಭಂಡಾರ್‌ಕಾರ‍್ಸ್ ಕಾಲೇಜಿನ ಬೆಳವಣಿಗೆಯಲ್ಲಿ ಬಹಳ ಜನರ ಪಾತ್ರವಿದೆ. ನಾನೊಬ್ಬ ನಿಮಿತ್ತನಾಗಿ ನಿರೂಪಕನಾಗಿ ಸೇವೆಸಲ್ಲಿಸುತ್ತ ಬಂದಿದ್ದೇನೆ. ಎಲ್ಲರೂ ಈ ಶಿಕ್ಷಣ ಸಂಸ್ಥೆ ಉಳಿಸಿ ಬೆಳೆಸಲು ಕಾಳಜಿ ತೋರಬೇಕು. ಮುಪ್ಪು ಮನಸ್ಸಿಗೆ ಬಾರದಿದ್ದರೆ ದೇಹಕ್ಕೂ ಬರುವುದಿಲ್ಲ. ಉತ್ತಮ ಚಿಂತನೆ, ಕ್ರಿಯಾಶೀಲತೆ ಹೊಂದಿದ್ದರೆ ಅದು ಸಾಧ್ಯ. ಕುಂದಪ್ರಭ ನೀಡಿದ ಕೋ.ಮ.ಕಾರಂತ ಈ ಪ್ರಶಸ್ತಿ ನನಗೆ ಸಿಕ್ಕಿದ ಇತರ ಎಲ್ಲ ಪ್ರಶಸ್ತಿಗಳಿಗಿಂತ ಶ್ರೇಷ್ಠವಾದುದು ಎಂದು ಹೇಳಿದರು.

ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕೊ.ಶಿವಾನಂದ ಕಾರಂತ ಅಭಿನಂದನಾ ಪತ್ರ ವಾಚಿಸಿದರು. ವಿಶ್ವನಾಥ ಕರಬ ನಿರೂಪಿಸಿದರು. ಯು. ಪಾಂಡುರಂಗ ಶೆಣೈ, ಎಚ್.ಸೋಮಶೇಖರ ಶೆಟ್ಟಿ ಕೆ.ಕೆ.ರಾಮನ್, ಹುಸೈನ್ ಹೈಕಾಡಿ ಅತಿಥಿಗಳನ್ನು ಗೌರವಿಸಿದರು. ಪಿ.ಜಯವಂತ ಪೈ ವಂದಿಸಿದರು. ಸುರೇಶ್ ಕೋಟೇಕಾರ್, ನಾಗೇಶ್ ಶ್ಯಾನುಭಾಗ್, ದೇವಿಪ್ರಸಾದ್ ಸಹಕರಿಸಿದರು

ನಂತರ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕಿರಣ್ ತಂಡದ ಕರಾಟೆ, ಉಪ್ಪುಂದ .ಮಹಿಳೆಯರಿಂದ ಚೆಂಡೆವಾದನ. ಪುಟಾಣಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

 

Exit mobile version