ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 1400ವರ್ಷದ ಇತಿಹಾಸ ಇರುವ ಸೇನಾಪುರ ಶ್ರೀ ಮಹಾವಿಷ್ಣು ದೇವಸ್ಥಾನ ನವೀಕೃತ ಶಿಲಾಮಯ ದೇವಸ್ಥಾನ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮ ಕಲಶೋತ್ಸವ ಫೆ.5 ರಿಂದ 8ರ ತನಕ ಸೇನಾಪುರದಲ್ಲಿ ಜರುಗಲಿದೆ.
ದೇವಸ್ಥಾನ ಜೀಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಅರಣು ಕುಮಾರ್ ಶೆಟ್ಟಿ, ದೇವಸ್ಥಾನ ಅರ್ಚಕ ವೆಂಕಟೇಶ ಮಂಜರ ನೇತೃತ್ವದಲ್ಲಿ ಕೋಟ ಲಕ್ಷ್ಮೀನಾರಾಯಣ ಸೋಮಯಾಜಿ ಆಚಾರ್ಯತ್ವದಲ್ಲಿ ಪ್ರತಿಷ್ಠಾ ಮಹೋತ್ಸವ, ಬ್ರಹ್ಮ ಕಲಶೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ‍್ಯಕ್ರಮ ನಡೆಯಲಿದೆ.
ಫೆ.5 ರಂದು ಮಧ್ಯಾಹ್ನ 12:35ಕ್ಕೆ ಶ್ರೀ ವಿಷ್ಣುಮೂರ್ತಿ ದೇವರ ಪ್ರತಿಷ್ಠೆ, ಬೆಳಗ್ಗೆ ೯.೩೦ ರಿಂದ ಶ್ರೀ ದೇವರ ರಜತ ಕವಚ, ಹೊರೆಕಾಣಿಕೆ ಶೋಭಾಯಾತ್ರೆ ಚಂಡೆ ವಾದ್ಯಘೋಷ ಜೊತೆ ನಾಡಾ ಗುಡ್ಡೆಯಂಗಡಿ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಿಂದ ಹೊರಡಿಲಿದೆ. ಹೊರೆ ಕಾಣಿಕೆ ಫೆ.೪, ಮತ್ತು ೫ರಂದು ಸ್ವೀಕರಿಸಲಾಗುತ್ತದೆ. ಶ್ರೀ ಹರಿ ವೇದಿಕೆಯಲ್ಲಿ ಸಂಜೆ ೭ಕ್ಕೆ ನಾಡಾಗುಡ್ಡೆಯಂಗಡಿ ಬೆಸ್ಟ್‌ಗೈಸ್ ತಂಡದಿಂದ ನೃತ್ಯ ವೈಭವ ಜರುಗಲಿದೆ.
ಫೆ.6, ದೇವತಾ ಪ್ರಾರ್ಥನೆ, ಪ್ರಾಯಶ್ಚಿತ ಹೋಮ, ಬಿಂಬ ಪ್ರತಿಷ್ಠಾಪನೆ, ಅಷ್ಟಬಂಧ, ಶಿಖರ ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ ನಡೆಯಲಿದ್ದು, ಸಂಜೆ ನಿತ್ಯ ಪೂಜೆ ಅಷ್ಟಾವಧಾನ ಸೇವೆ ಜರುಗಲಿದೆ. ಸಂಜೆ ೭ಕ್ಕೆ ಶ್ರೀ ಹರಿ ವೇದಿಕೆಯಲ್ಲಿ ಬಂಟ್ವಾಡಿ ನ್ಯೂ ಅನುದಾನಿತ ಹಿರಿಯ ಪ್ರಾಥಮಿ ಶಾಲೆ ಮಕ್ಕಳಿಂದ ವೀರ ಅಭಿಮನ್ಯ ಯಕ್ಷಗಾನ ಬೆಳಕು ಕಾಣಲಿದೆ.
ಫೆ.7, ಬೆಳಗ್ಗೆ ಶಾಂತಿ ಹೋಮ, ಕಲಾವೃದ್ಧಿ ಹೋಮ, ಕಲಶಾಭಿಷೇಕ ಪೂಜೆ, ಸಂಜೆ 108 ಕಲಶಾಧಿವಾಸ ಪೂಜೆ, ಅಧಿವಾಸ ಹೋಮ, ಪ್ರಸಾದ ವಿತರಣೆ ನಡೆಯಲಿದೆ. ೫೦ ಸಾವಿರಕ್ಕೂ ಮಿಕ್ಕ ದೇಣಿಗೆ ನೀಡಿದವರ ಧಾರ್ಮಿಕ ವೇದಿಕೆಯಲ್ಲಿ ಗೌರವಿಸಲಾಗುತ್ತದೆ. ಸಂಜೆ ೭ಕ್ಕೆ ಶ್ರೀ ಹರಿ ವೇದಿಕೆಯಲ್ಲಿ ಆಕಾಶವಾಣಿ ಕಲಾವಿದ ಚಂದ್ರ ಹೆಮ್ಮಾಡಿ ಬಳಗದವರಿಂದ ಸಂಗೀತ ರಸಮಂಜರಿ ನಡೆಯಲಿದೆ.
ಫೆ.8 ಬೆಳಗ್ಗೆ ಪೂರ್ಣಾಹುತಿ, ಬ್ರಹ್ಮಕಲಶಾಭಿಷೇಕ, ಮಾಹಪೂಜೆ, ಫಲಮಂತ್ರಕ್ಷತೆ, 12ಕ್ಕೆ ಮಹಾಅನ್ನ ಸಂತರ್ಪಣೆ, ಸಂಜೆ ರಂಗಪೂಜೆ, ಅಷ್ಟಾವಧಾನ ಸೇವೆ ನಡೆಯಲಿದ್ದು, ಮಧ್ಯಾಹ್ನ ೩ಕ್ಕೆ ಧಾರ್ಮಿಕ ಸಭೆ ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಉಪನ್ಯಾಸಕ ಡಾ.ಬಿ.ಮಂಜುನಾಥ ಸೋಮಯಾಜಿ ಆಶೀರ್ವಚನ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಪ್ರಮೋದ್ ಮಧ್ವರಾಜ್, ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪಾಲ್ಗೊಳ್ಳಲಿದ್ದಾರೆ.
ರಾತ್ರಿ ಗಂಟೆ 8ಕ್ಕೆ ಶ್ರೀ ಹರಿ ವೇದಿಕೆಯಲ್ಲಿ ಉಡುಪಿ ಪೆರಂಪಳ್ಳಿ ಯಕ್ಷ ಸಂಗೀತ ನಾದವೈಭವಂ ಅರ್ಪಿಸುವ ಭಾಗವತ ನಾರಾಯಣ ಶಬರಾಯ ನಿರ್ದೇಶನದಲ್ಲಿ ಶ್ರೀ ಹರಿ ದರ್ಶನ ರೂಪಕ ನಡೆಯಲಿದೆ.
ದೇವಸ್ಥಾನ ವಿಶೇಷತೆ :
ಕಳೆದ ಒಂದು ವರ್ಷದಿಂದ ನೂತನ ಶಿಲಾಮಯ ದೇವಸ್ಥಾನ ಕಾರ‍್ಯ ನಡೆಯುತ್ತಿದ್ದು, ಕೇರಳ ಮಾದರಿಯಲ್ಲಿ ರಚನೆಯಾಗಿದೆ. ದೇವಸ್ಥಾನ ಪಶ್ಚಿಮಾಭಿಮುಖವಾಗಿದ್ದು, 3 ಅಡಿ ಎತ್ತರದ ರುದ್ರಾಕ್ಷಿ ಶಿಲೆ ನಿರ್ಮಿತ ವಿಗ್ರಹ ಗರ್ಭಗುಡಿಯಲ್ಲಿದ್ದು, ತೀರ್ಥಮಂಟಪ, ಸುತ್ತಾ ಬಲಿ ಕಲ್ಲುಗಳಿವೆ. ಕ್ಷೇತ್ರ ಪಾಲ, ಪುಷ್ಕರಣಿ, ಹಾಗೂ ದೇವರ ಕಂಬಳಗದ್ದೆ ದೇವಸ್ಥಾನ ಪಕಕ್ದಲ್ಲಿದೆ. ದೇವಸ್ಥಾನ ಪರಿಚಾರಕರಾಗಿ ಕಾರ್ಯನಿರ್ವಹಿಸುವ ಹುಟ್ಟು,ಕಟ್ಟು ಮತ್ತು ಬಾಗಿನಮನೆ ಕುಟುಂಬ ದೇವಸ್ಥಾನ ಪರಿಸರದಲ್ಲಿದ್ದಾರೆ. ಹಿಂದೆ ದೇವಸ್ಥಾನ ರಥೋತ್ಸವ, ಉತ್ಸವ ನಡೆದ ಬಗ್ಗೆ ಕುರುಹುಗಳು ಸಿಗುತ್ತವೆ. ಪಶ್ಚಿಮಕ್ಕೆ ಪರಿವಾರ ದೈವಸ್ಥಾನ ಇದೆ.
ದೇವರ ಪ್ರಭಾವಳು ಹಿತ್ತಾಳೆಯದ್ದಾಗಿದ್ದು, ಗರ್ಭಗುಡಿಯ ಮಹಾದ್ವಾರಕ್ಕೆ ಹಿತ್ತಾಳೆ ಕವಚವಿದ್ದು 1666ರಲ್ಲಿ ಸೇನಾಪುರ ಮಾಧವ ವೆಂಕಟರಮಣ ಆಚಾರ್ಯ, ಸೌಭಾಗ್ಯವತಿ ಯಶೋದಾ ದೇವಿಯವರ ಸೇವೆ ಎಂದು ಬರೆದಿದೆ. 1997ರಲ್ಲಿ ದಿ.ಚಂದ್ರ ಮಂಜರು ೧೦ ಲಕ್ಷ ವೆಚ್ಚದಲ್ಲಿ ಹೆಬ್ಬಾಗಿಲು ನಿರ್ಮಿಸಿದ್ದಾರೆ. ಅದೆಷ್ಟೋ ಜೋಡಿಗಳು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಂಕಣ ಭಾಗ್ಯ ಕಂಡಿದ್ದು, ಜೀವನದಲ್ಲಿ ಸಫಲತೆ ಕಂಡುಕೊಂಡಿದ್ದಾರೆ.
ಸುಮಾರು 400 ವರ್ಷದಿಂದ ಒಂದೇ ಕುಟುಂಬದ (ಸೇನಾಪುರ ಮಂಜರ ಮನೆ) ದೇವರ ಪೂಜಾಕೈಂಕರ್ಯ ಮಾಡಿಕೊಂಡು ಬಂದಿದ್ದು,ಈಗ 9ನೇ ತಲೆಮಾರು ವೆಂಕಟೇಶ ಮಂಜರು ಅರ್ಚಕರಾಗಿದ್ದಾರೆ. ಸುಮಾರು 70 ಲಕ್ಷ ರೂ ವೆಚ್ಚದಲ್ಲಿ ನೂತನ ದೇವಸ್ಥಾನ ನಿರ್ಮಿಸಲಾಗಿದೆ. ದೇಣಿಗೆ ನೀಡುವವರು ನಾಡಾ ವಿಜಯಾ ಬ್ಯಾಂಕ್ ಎಸ್.ಬಿ. ಅಕೌಂಟ್ ನಂ.115401011003215 ಇಲ್ಲಿಗೆ ಕಳುಹಿಸಬಹುದು.