ಮಾಸ್ಕೊ: ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಸಂಪೂರ್ಣ ದೇಹ ಕಸಿಯ ಪ್ರಯೋಗ 2017ರಲ್ಲಿ ನಡೆಯಲಿದೆ. ವ್ಯಕ್ತಿಯೊಬ್ಬನ ತಲೆಯನ್ನು ದಾನಿಯ ದೇಹಕ್ಕೆ ಜೋಡಿಸುತ್ತಿರುವುದೇ ಈ ಪ್ರಯೋಗ.
ಸ್ನಾಯುಗಳನ್ನು ಅಕ್ಷರಶಃ ಮುಕ್ಕಿ ಕ್ಷೀಣಗೊಳಿಸಿಬಿಡುವ ವೆರ್ಡಿರಂಗ್ ಹಾಫ್ಮನ್ ರೋಗದಿಂದ ಬಳಲುತ್ತಿರುವ ರಷ್ಯಾದ ವಲೆರಿ ಸ್ಪಿರಿಡೊನೊವ್ ಈ ಕಸಿಗೆ ಪ್ರಯೋಗ ಪಶುವಾಗಿ ತನ್ನನ್ನು ಒಡ್ಡಿಕೊಳ್ಳಲು ಸಿದ್ಧವಾಗಿದ್ದಾರೆ. ಈ ಶಸ್ತ್ರಚಿಕಿತ್ಸೆಯಲ್ಲಿ ರೋಗಿಯ ತಲೆಯನ್ನು ದಾನಿಯ ದೇಹಕ್ಕೆ ಜೋಡಿಸಲಾಗುತ್ತದೆ.
”ಈ ಶಸ್ತ್ರಚಿಕಿತ್ಸೆಯ ಮೂಲಕ ಗುಣವಾಗುವುದೇ ಎಂಬುದನ್ನು ಕಾದು ನೋಡಬೇಕು. ವರ್ಷದಿಂದ ವರ್ಷಕ್ಕೆ ನನ್ನ ದೇಹದ ಪರಿಸ್ಥಿತಿ ಹದಗೆಡುತ್ತಿದೆ. ನನಗೆ ಇದಲ್ಲದೆ ಬೇರೆ ದಾರಿಯಿಲ್ಲ,” ಎನ್ನುತ್ತಾರೆ.
ಕಂಪ್ಯೂಟರ್ ವಿಜ್ಞಾನಿಯಾಗಿರುವ 30ರ ಹರೆಯದ ಸ್ಪಿರಿನೊವ್ ಈ ಶಸ್ತ್ರ ಚಿಕಿತ್ಸೆಗೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ. ”ನನ್ನ ತಲೆಯನ್ನು ಹೆಣ್ಣಿನ ದೇಹಕ್ಕೆ ಹಚ್ಚುವುದು ಬೇಡ. ಶಸ್ತ್ರ ಚಿಕಿತ್ಸೆಯ ಬಳಿಕ ಕಣ್ಣು ಬಿಟ್ಟಾಗ ನಾನು ಗಂಡಾಗಿಯೇ ಇರಬೇಕು,” ಎಂದಿದ್ದಾರೆ
ಸಂಪೂರ್ಣ ದೇಹ ಕಸಿಯಲ್ಲಿ ಅನೇಕ ಸವಾಲುಗಳಿವೆ. ಇದೇ ಚೊಚ್ಚಲ ಪ್ರಯತ್ನವಾದ್ದರಿಂದ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಊಹಿಸಲಾಗದು. ವಿಜ್ಞಾನದ ಪ್ರಗತಿಗಾಗಿ ಜೀವ ತ್ಯಾಗ ಮಾಡಲೂ ಸ್ಪಿರಿನೊವ್ ಸಿದ್ಧವಾಗಿದ್ದಾರೆ. ದಾನಿ ದೇಹಕ್ಕೆ ರೋಗಿಯ ರುಂಡ ಜೋಡಿಸುವ ಶಸ್ತ್ರ ಚಿಕಿತ್ಸೆಯನ್ನು ಇಟಲಿಯ ಸೆರ‌್ಗಿಯೊ ಕನವೆರೊ ನೇತೃತ್ವದ ತಂಡ ಮಾಡಲಿದೆ. ಸುಮಾರು 36 ತಾಸು ನಡೆಯುವ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯಲ್ಲಿ 150 ಮಂದಿ ವೈದ್ಯರು ನರ್ಸ್‌ಗಳು ಭಾಗವಹಿಸಲಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿ ಒಂದು ತಿಂಗಳು ಕೋಮಾದಲ್ಲಿ ಇರಲಿದ್ದಾನೆ. ಇದರಿಂದ ಸಂಪೂರ್ಣ ಚೇತರಿಸಿಕೊಳ್ಳಲು ಒಂದುವರ್ಷ ಚಿಕಿತ್ಸೆ ಪಡೆಯ ಬೇಕಿದೆ.
ಇಲಿಗಳ ಮೇಲೆ ಮಾಡಿರುವ ರುಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಚೀನಾದ ವಿಜ್ಞಾನಿಗಳು ಹೇಳಿದ್ದಾರೆ. ಆದರೆ ರುಂಡ ಕಸಿ ಈಗಲೂ ಸಾಧಿಸಲಸಾಧ್ಯವಾದ ಕನಸು ಎಂಬುದು ಅನೇಕ ವಿಜ್ಞಾನಿಗಳ ವಾದ. ಇಂಥ ಪ್ರಯತ್ನವೊಂದು 1954ರಲ್ಲಿ ನಡೆದಿತ್ತು. ಸೋವಿಯತ್ ತಜ್ಞ ವ್ಲಾಡಿಮಿರ್ ಡೆಮಿಖೊವ್ 20 ನಾಯಿಗಳಿಗೆ ರುಂಡ ಕಸಿ ಮಾಡಿದ್ದ. ಈ ಎರಡು ತಲೆಯ ನಾಯಿಗಳು ಒಂದು ತಿಂಗಳ ಕಾಲ ಬದುಕಿದ್ದವು.