ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟೇಶ್ವರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ ಜರುಗಿತು. ಬೆಳಿಗ್ಗೆ ದೇವತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಸಾನಿಧ್ಯ ಹೋಮ,ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕ, ಶತಕಲಶಾಭಿಷೇಕ, ಮಂಗಲ ದ್ರವ್ಯ ನಿರೀಕ್ಷಣೆ, ಮಧ್ಯಾಹ್ನ ಮಹಾಪೂಜೆ ಹಾಗೂ ಮಹಾ ಸಂತರ್ಪಣೆ ನಡೆಯಿತು.
ಸಂಜೆ ಮೊದಲು ೬ ಘಂಟೆಗೆ ಬೆಳ್ಳಿ ಪಲ್ಲಕಿಯಲ್ಲಿ ಹಗಲು ಉತ್ಸವ, ರಾತ್ರಿ ರಜತ ಪುಷ್ಪ ರಥ ಉತ್ಸವ ನಡೆಯಿತು.
ವಿಶೇಷವಾಗಿ ಹೂವಿನಿಂದ ಅಲಂಕರಿಸಿದ ಬೆಳ್ಳಿ ರಥ ಪೇಟೆಯ ನಾಲ್ಕು ಪ್ರಮುಖ ಬೀದಿಗಳಲ್ಲಿ ಸಾಗಿ ಬಂತು. ಈ ಸಂದರ್ಭದಲ್ಲಿ ಸಮಾಜ ಭಾಂದವರು ಆರತಿ ನೀಡಿ ದೇವರ ಅನುಗ್ರಹಕ್ಕೆ ಪಾತ್ರರಾದರು. ಅಲ್ಲದೇ ಬೀದಿಯ ಪ್ರಮುಖ ಕಟ್ಟೆಯಲ್ಲಿ ದೇವರನ್ನು ಕುಳ್ಳಿರಿಸಿ ವಿಶೇಷ ಪೂಜೆ ನಡೆಸಲಾಯಿತು.
ರಥದೊಂದಿಗೆ ದೇವರ ಭಜನೆ,ಸಂಕೀರ್ತನೆಯೊಂದಿಗೆ ಸಾಗಿ ಬಂದ ಭಜನಾ ತಂಡ ಮನೆಯ ಎದುರುಗಡೆ ಬಿಡಿಸಿದ ರಂಗೋಲಿ ಹಾಗೂ ದೀಪಕ್ಕೆ ಸುತ್ತು ಬಂದು ಮುಂದೆ ಸಾಗಿದರು.
ರಾತ್ರಿ ದೇವಳದಲ್ಲಿ ಅಷ್ಠಾವಧಾನ ಸೇವೆ, ವಿಶೇಷ ವಸಂತ ಪೂಜೆ ನಡೆಯಿತು.
ಧಾರ್ಮಿಕ ವಿಧಿವಿಧಾನಗಳು ವೇ.ಮೂ.ಶ್ರೀನಿವಾಸ್ ಭಟ್ ಹಾಗೂ ವೇ.ಮೂ.ಪ್ರಶಾಂತ್ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ಈ ಎಲ್ಲಾ ಕಾರ್ಯಕ್ರಮದಲ್ಲಿ ದೇವಳದ ಮೊಕ್ತೇಸರರು, ಶ್ರೀ ರಾಮ ಸೇವಾ ಸಂಘದ ಹಾಗೂ ಶ್ರೀ ರಾಮ ಭಜನಾ ಮಂಡಳಿಯ ಸದಸ್ಯರು, ಸೇವಾದಾರರಾದ ಕೆ.ವಿ.ಎಂ ಕಾಮತ್ ಕುಟುಂಬಸ್ಥರು ಭಾಗವಹಿಸಿದರು.