Kundapra.com ಕುಂದಾಪ್ರ ಡಾಟ್ ಕಾಂ

ಸರ್ಕಾರ ಆಂಗ್ಲ ಶಿಕ್ಷಕರ ನೇಮಿಸಿ ಕನ್ನಡ ಶಾಲೆ ಉಳಿಸಲಿ : ಪುನರೂರು

೮ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮುದ್ರಾಡಿ: ಕರ್ನಾಟಕದ ಎಲ್ಲಾ ಕನ್ನಡ ಶಾಲೆಗಳು ಮುಂದಿನ ೫ ವರ್ಷದಲ್ಲಿ ಮುಚ್ಚುವ ಭೀತಿಯಲ್ಲಿದ್ದು ಸರ್ಕಾರ ೧ನೇ ತರಗತಿಯಿಂದಲೇ ಆಂಗ್ಲ ಭಾಷೆ ಕಡ್ಡಾಯ ಮಾಡಿ ಆಂಗ್ಲ ಶಿಕ್ಷಕರನ್ನು ನೇಮಿಸಿ ಕನ್ನಡ ಶಾಲೆಯಲ್ಲಿ ಓದುವ ಮಕ್ಕಳ ಭವಿಷ್ಯವನ್ನು ಉಳಿಸಿ ಎಂದು ೮ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಸರ್ಕಾರವನ್ನು ಒತ್ತಾಯಿಸಿದರು.

ಅವರು ಮುದ್ರಾಡಿ ನಾಟ್ಕದೂರಿನಲ್ಲಿ ಡಜನ್ ನಾರಾಯಣ ಶೆಟ್ಟಿ ದ್ವಾರ ನಾಟ್ಕದೂರು ಬಯಲು ರಂಗಮಂದಿರದ ಎಂ.ಕೆ.ರವೀಂದ್ರ ನಾಥ ವೇದಿಕೆಯಲ್ಲಿ ಶನಿವಾರ ಶ್ರೀ ವಿದ್ಯಾ ಸಂಸ್ಥೆ ಅರ್ಪಿಸಿ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕನ್ನಡ ಸಾಹಿತ್ಯ ಅಜೆಕಾರು ಹೋಬಳಿ, ನಮ ತುಳುವೆರ್ ಕಲಾ ಸಂಘಟನೆ, ನಾಟ್ಕದೂರು ಮುದ್ರಾಡಿ ಸರ್ವರ ಸಹಕಾರದೊಂದಿಗೆ ನಡೆದ ೮ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಯಾವ ಮಾಧ್ಯಮದಲ್ಲಾದರೂ ಕಲಿಸಿರಿ ಕನ್ನಡ ಭಾಷೆ ಕಲಿಸಿ, ಕನ್ನಡವೂ ಬೇಕು, ಮಕ್ಕಳ ಮುಂದಿನ ಭವಿಷ್ಯಕ್ಕೆ ಆಂಗ್ಲ ಭಾಷೆಯೂ ಬೇಕು ಎಂದ ಪುನರೂರು ಮಕ್ಕಳಿಗೆ ಮನಸ್ಸು ಅರಳಿಸುವ ಸಾಹಿತ್ಯ ಓದುವ ಅಭಿರುಚಿ ಬೆಳೆಸುವ ಮೂಲಕ ಕನ್ನಡ ಉಳಿಸಿ ಎಂದು ಹರಿಕೃಷ್ಣ ಪುನರೂರು ಮನವಿ ಮಾಡಿದರು.

ಪ್ರಾಮಾಣಿಕತೆ, ಬದ್ಧತೆಗೆ ಸಮ್ಮೇಳನ ಸಾಕ್ಷಿ ! : ಬೆಳದಿಂಗಳ ಸಾಹಿತ್ಯ ಸಮ್ಮೇಳನ ಅದ್ಬುತ ಸಾಹಸ, ಪ್ರಾಮಾಣಿಕತೆ ಮತ್ತು ಬದ್ಧತೆಗೆ ಸಮ್ಮೇಳನ ಸಾಕ್ಷಿಯಾಗಿದೆ, ಬೆಳದಿಂಗಳ ಸಾಹಿತ್ಯ ಲೋಕ ಭವಿಷ್ಯದ ಬಾಗಿಲು ತೆರೆಸಿದೆ, ಹೃದಯಕ್ಕೆ ಹತ್ತಿರವಾದ ಕಾರ್ಯಕ್ರಮ ಎಂದು ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ ಸಮ್ಮೇಳನವನ್ನು ದೊಂದಿ ಬೆಳಗುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಸಾಹಿತ್ಯ ತೇರಿನ ಕನಸು ನನಸು : ಪ್ರತಿ ಸಮ್ಮೇಳನ ನಡೆಸಿ ಮುಗಿಸುವ ವೇಳೆಗೆ ಇನ್ನು ಸಾಕು ಎಂಬ ಭಾವನೆ ಬಂದದ್ದಿದೆ, ಆದರೂ ೮ನೇ ಸಮ್ಮೇಳನ ಮುಗಿದಿದೆ ಎಂದು ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಸಮ್ಮೇಳನ ಸಮಿತಿ ಅಧ್ಯಕ್ಷರಾದ ಸಾಹಿತಿ ಶೇಖರ ಅಜೆಕಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಯಕಾರಿ ಸಮಿತಿ ಸದಸ್ಯ ಭುವನಪ್ರಸಾದ್ ಹೆಗ್ಡೆ, ಕಾರ್ಕಳ ತಾಲ್ಲೂಕು ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಉಡುಪಿ ನಾದವೈಭವಂ ಉಡುಪಿ ವಾಸುದೇವ ಭಟ್, ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಪೂಜಾರಿ, ಮುದ್ರಾಡಿ ಕ್ಷೇತ್ರದ ಧರ್ಮಯೋಗಿ ಮೋಹನ್, ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್, ಸಮಿತಿಯ ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆಯಲ್ಲಿ ಕೃಷಿ ಗೋಷ್ಠಿ ನಡೆಯಿತು., ಜಾನ್ ಡಿಸೋಜಾ ಗುಂಡಮೆ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ರಾಧಾಕೃಷ್ಣ ತೋಡಿಕಾನ ಕೃಷಿ ಪತ್ರಿಕೆಗಳ ವಿಚಾರ ಮಂಡನೆ ಮಾಡಿದರು. ಮೂಡುಬಿದಿರೆ ತಾಕೋಡೆಯ ಎಡ್ವರ್ಡ್ ರೆಬೆಲ್ಲೋ ಅವರಿಗೆ ಮುಂಬಯಿ ಮಯೂರ ಸಾಂಸ್ಕೃತಿಕ ಪ್ರತಿಷ್ಠಾನದ ಕೃಷಿ ಬಂಧು ಪುರಸ್ಕಾರ ಪ್ರದಾನ ಮಾಡಲಾಯಿತು. ಶಿಕ್ಷಕ ಗಣೇಶ ಜಾಲ್ಸೂರು ಅವರು ಕಾರ್ಯಕ್ರಮ ನಿರೂಪಿಸಿದರು. ಹೆಬ್ರಿ ಟಿ.ಜಿ. ಆಚಾರ್ಯ ವಂದಿಸಿದರು. ಮಂಜಪ್ಪ ದ್ಯಾ ಗೋಣಿ, ಸುಪ್ರಿತಾ ಎಸ್.ಜೆ ಕುಂದಾಪುರ, ಸುಕುಮಾರ್ ಮುನಿಯಾಲ್ ಸಹಕರಿಸಿದರು.

ವಿಶೇಷತೆಗಳು:
# ೧೬ ಮಂದಿ ರಾಜ್ಯ ಮಟ್ಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಬಾಲಪ್ರತಿಭೆಗಳ ಅದ್ಭುತ ಪ್ರತಿಭಾ ಪ್ರದರ್ಶನ ಮತ್ತು ಗೌರವಾರ್ಪಣೆ.
# ಮೊದಲ ಬಾರಿಗೆ ಪುನರೂರು ಅವರು ೧೫ ನಿಮಿಷಗಳ ಎರಡು ಭಾಷಣ ಮಾಡಿ ಕನ್ನಡದ ಬಗೆಗಿನ ತಮ್ಮ ಪ್ರಖರ ವಿಷಯಗಳನ್ನು ಪ್ರಕಟಿಸಿದರು.
# ತುಳು ಕನ್ನಡ ಪುಸ್ತಕ ಪ್ರದರ್ಶನವಿತ್ತು.
# ಹಗಲಿನ ಸಮ್ಮೇಳನಗಳಂತೆ ರಾತ್ರಿ ಊಟ, ರಾತ್ರಿ ಚಾ ತಿಂಡಿ ವ್ಯವಸ್ಥೆಯೊಂದಿಗೆ ಸಂಜೆ ೫.೦೦ ರಿಂದ ಬೆಳಗ್ಗೆ .೬.೧೩ ನಿಮಿಷದವರೆಗೆ ಸಮ್ಮೇಳನ ನಡೆಯಿತು.
# ೨೧ ಮಂದಿ ಯುವ ಸಾಧಕರಿಗೆ, ೧೫ ಮಂದಿ ಹಿರಿಯ ಸಾಧಕರಿಗೆ, ೯ ಸಂಘ ಸಂಸ್ಥೆಗಳಿಗೆ ಸಮ್ಮೇಳನದ ಗೌರವ ಸಂದಿದೆ.
# ಸುತ್ತ ಕಾಡು ಕಾಡಿನ ನಡುವೆ ಬೆಳದಿಂಗಳ ಸೌಂದರ್ಯ ರಾಶಿ ಕಾರ್ಯಕ್ರಮದ ವಿಶೇಷತೆಯಾಗಿತ್ತು.
# ಚೌಟರ ಬಯಲು ಎಂಬ ನೂತನ ಬಯಲು ರಂಗಮಂದಿರದಲ್ಲಿ ನಡೆದ ಪ್ರಪ್ರಥಮ ಕಾರ್ಯಕ್ರಮ ಇದಾಗಿತ್ತು.

 

Exit mobile version