Kundapra.com ಕುಂದಾಪ್ರ ಡಾಟ್ ಕಾಂ

ಹರಿಓಂ ಎಸ್‌ವಿಎಸ್ ಗಂಗೊಳ್ಳಿಗೆ “ಆಮ್ಗೆಲೆ ಟ್ರೋಫಿ-2017

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಿ.ಎಸ್.ಬಿ ಸಮಾಜದವರು ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಗುರುಗಳ ಅನುಗ್ರಹ, ಹಿರಿಯರ ಅವಿರತ ಶ್ರಮ ನಮಗೆ ಬೆನ್ನೆಲುಬಾಗಿದೆ. ಕ್ರಿಕೆಟ್ ಪಂದ್ಯಾಟದ ಆಯೋಜನೆಯಿಂದ ಇತರ ಊರುಗಳ ಸಮಾಜ ಬಾಂಧವರ ಪರಿಚಯದಿಂದ ಯುವ ಸಮುದಾಯದ ತಂಡ ರೂಪುಗೊಳ್ಳುತ್ತದೆ. ಆ ಮೂಲಕ ಸಮಾಜದ ಧಾರ್ಮಿಕ ಕಾರ್ಯಕ್ರಮಗಳಿಗೆ ಸ್ವಯಂ ಸೇವಕರನ್ನು ಒಗ್ಗೂಡಿಸುವ ಕಾರ್ಯ ನಡೆಯಬೇಕಿದೆ ಎಂದು ಸಿದ್ದಾಪುರ ಸಂಯುಕ್ತ ಜಿ.ಎಸ್.ಬಿ ಸಮಾಜದ ಆಧ್ಯಕ್ಷ ಗೋಪಿನಾಥ ಕಾಮತ್ ಆಶಿಸಿದರು.

ಅವರು ಬಸ್ರೂರಿನ ಸರಕಾರಿ ಪ್ರೌಡಶಾಲೆಯ ಮೈದಾನದಲ್ಲಿ ಬಸ್ರೂರು ಜಿ.ಎಸ್.ಬಿ ಸಭಾ ಆಶ್ರಯದಲ್ಲಿ ಹಾಗೂ ಚಿತ್ತಾರ ಕ್ಯಾಶ್ಯೂ ವಂಡಾರು ಇವರ ಪ್ರಾಯೋಜಕತ್ವದಲ್ಲಿ ಜಿ.ಎಸ್.ಬಿ ಸಮಾಜ ಬಾಂಧವರಿಗೆ ಸೀಮಿತ ಓವರುಗಳ 30 ಗಜಗಳ ಕ್ರಿಕೆಟ್ ಪಂದ್ಯಾಟ “ಆಮ್ಗೆಲೆ ಟ್ರೋಫಿ-2017″ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಹರಿಓಂ ಎಸ್‌ವಿಎಸ್ ಗಂಗೊಳ್ಳಿ ತಂಡ ವಿಜೇತ ತಂಡವಾಗಿ ಪ್ರಥಮ ಬಹುಮಾನವಾದ ರೂ 11,777 ಹಾಗೂ ಶಾಶ್ವತ ಫಲಕ, ದ್ವಿತೀಯ ಸ್ಥಾನವನ್ನು ಕೊಂಕಣ್ ಎಕ್ಸ್‌ಪ್ರೆಸ್ ಕೋಟೇಶ್ವರ ರೂ 7,777 ಹಾಗೂ ಶಾಶ್ವತ ಫಲಕ ಪಡೆದುಕೊಂಡಿತು.

ಪಂದ್ಯಶ್ರೇಷ್ಟ ಹಾಗೂ ಉತ್ತಮ ದಾಂಡುಗಾರ ಪ್ರಶಸ್ತಿಯನ್ನು ನಾಗೇಶ್, ಸರಣಿ ಶ್ರೇಷ್ಟವನ್ನು ಸತೀಶ ಕಾಮತ್, ಉತ್ತಮ ಬೌಲರ್ ಲಕ್ಷ್ಮೀಶ ಹಾಗೂ ಎಮರ್ಜಿಂಗ್ ಆಟಗಾರನಾಗಿ ಶ್ರವಣ ಪ್ರಭು ಕುಂದಾಪುರ ಪ್ರಶಸ್ತಿ ಪಡೆದುಕೊಂಡರು. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸುಮಾರು 20 ಜಿಎಸ್‌ಬಿ ಸಮಾಜದ ತಂಡಗಳು ಭಾಗವಹಿಸಿದ್ದವು.

ಸಮಾರಂಭದ ಅಧ್ಯಕ್ಷತೆಯನ್ನು ಬಸ್ರೂರು ಜಿ.ಎಸ್.ಬಿ. ಸಭಾದ ಆದ್ಯಕ್ಷರಾದ ಬಿ.ರಘುವೀರ ಆಚಾರ್ಯ ವಹಿಸಿದರು. ಮುಖ್ಯ ಅತಿಥಿಗಳಾಗಿ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಶ್ರೀಧರ ಕಾಮತ್, ಬಸ್ರೂರು ಜಿ.ಎಸ್.ಬಿ ಸಮಾಜದ ಅಧ್ಯಕ್ಷರಾದ ನರಸಿಂಹರಾಯ ಪ್ರಭು, ಸಿದ್ದಾಪುರ ತಾಲೂಕು ಪಂಚಾಯತ್ ಸದಸ್ಯರಾದ ವಾಸುದೇವ ಪೈ, ಸಿದ್ದಾಪುರ ಮಹಾಮ್ಮಾಯ ಆಯಿಲ್‌ನ ಟಿ.ಜಿ.ಪಾಂಡುರಂಗ ಪೈ, ಬಸ್ರೂರು ಹತ್ತು ಸಮಸ್ತರ ಪ್ರಮುಖರಾದ ಬಿ.ನರಸಿಂಹ ಪ್ರಭು, ಉದ್ಯಮಿ ಎಚ್ ಗಣೇಶ ಕಾಮತ್ ಸಭೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಆಯೋಜಿಸಿದ ಲಕ್ಷ್ಮೀಕಾಂತ ಆಚಾರ್ಯ ಹಾಗೂ ರಾಮಚಂದ್ರ ಪಡಿಯಾರ್ ಇವರನ್ನು ಸನ್ಮಾನಿಸಲಾಯಿತು. ಬಿ.ಗಣೇಶ ಕಾಮತ್ ಸ್ವಾಗತಿಸಿದರು. ಮಂಜುನಾಥ ಪಾಳ್ ಮತ್ತು ಬಿ.ಎಸ್. ದಾಮೋದರ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ರಾಮಚಂದ್ರ ಪಡಿಯಾರ್ ಧನ್ಯವಾದವಿತ್ತರು.

Exit mobile version