Kundapra.com ಕುಂದಾಪ್ರ ಡಾಟ್ ಕಾಂ

ಸುರಭಿ ಬೈಂದೂರು ಸಾಂಸ್ಕೃತಿಕ ವರ್ಷಧಾರೆ ‘ಸುರಭಿ ಜೈಸಿರಿ’ ಉದ್ಘಾಟನೆ

ಕಲಾಸಂಸ್ಥೆಗಳಿಂದ ಕಲೆಯ ಅಳಿವಿನ ಆತಂಕ ದೂರ: ದೀಪಾ ರವಿಶಂಕರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಲೆಯನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ವರ್ಗಾಯಿಸುವ ಕೆಲಸ ಬಹುಮುಖ್ಯವಾದುದು. ನಮ್ಮ ಸಂಸ್ಕೃತಿ ಹಾಗೂ ಕಲಾ ಪ್ರಕಾರವನ್ನು ಮುಂದಿನ ಜನಾಂಗ ಕಲಿಯಲಾರವು ಎಂಬ ಆತಂಕ ದೂರವಾಗಿಸುವ ಮಾಧ್ಯಮವಾಗಿ ಕಲಾ ಸಂಸ್ಥೆಗಳ ಕಾರ್ಯನಿರ್ವಹಿಸುತ್ತವೆ ಎಂದು ಲೇಖಕಿ, ನಟಿ ದೀಪಾ ರವಿಶಂಕರ್ ಬೆಂಗಳೂರು ಹೇಳಿದರು

ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಸಂಸ್ಥೆಯ ೧೭ನೇ ವರ್ಷದ ಸಂಭ್ರಮದೊಂದಿಗೆ ಆಯೋಜಿಸಿದ ಮೂರು ದಿನಗಳ ಕಾರ್ಯಕ್ರಮ ಸುರಭಿ ಜೈಸಿರಿ ಉದ್ಘಾಟಿಸಿ ಮಾತನಾಡಿದರು. ಭಾರತೀಯರ ಮೇಲೆ ಹಲವು ಪರಕೀಯ ದಾಳಿಗಳು ನಡೆದ ಬಳಿಕವೂ ಪ್ರದರ್ಶನ ಕಲೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಭಾರತೀಯ ಕಲೆಗಳನ್ನು ಇಂದಿಗೂ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವಂತಹ ಗಟ್ಟಿ ಬೇರನ್ನು ಹೊಂದಿದೆ. ಇಂದಿನ ಪೀಳಿಗೆ ಕಲೆಯನ್ನು ಮುಂದುವರಿಸುತ್ತಾರೋ ಬಿಡುತ್ತಾರೋ ಎಂಬುದಕ್ಕಿಂತ ಅವುಗಳು ಅವರ ಮನಸ್ಸಿನೊಳಕ್ಕೆ ಹೊಕ್ಕು ಕೂರುತ್ತದೆ. ಕಲೆಯನ್ನು ಕಲಿಸುವ ಕಾರ್ಯ ನಿರಂತರವಾಗಿ ನಡೆಸುವುದು ಬಹುಮುಖ್ಯವಾದುದು ಎಂದರು.

ಸಾಹಿತಿ, ರಂಗಭೂಮಿ ಕಲಾವಿದ ಜಯಶೇಖರ್ ಬೆಳಗುಂಬ ಮಾತನಾಡಿ ಬದುಕಿನಲ್ಲಿ ಕಲೆ ಅತ್ಯಮೂಲ್ಯವಾದುದು. ಜೀವನ ಹಣದ ಪ್ರಾಮುಖ್ಯತೆ ನೀಡುತ್ತದೆ. ಆದರೆ ಬದುಕು ಕಲೆಯನ್ನು ಕಲಿಸಿಕೊಡುತ್ತದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಕಲೆಯನ್ನು ಆಸ್ವಾದಿಸುವುದು ಒಂದು ಫ್ಯಾಶನ್ ಆಗಿದೆ. ಆದರೆ ಗ್ರಾಮೀಣ ಭಾಗದಲ್ಲಿನ ಕಲಾಸ್ವಾದನೆಗೆ ಜನ ಸೇರುವುದು ವಿಶೇಷವಾದುದು ಎಂದರು.

ಶ್ರೀ ಸೇನೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚನ್ನಕೇಶವ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅದಿತಿ ಬಿ. ಶೆಟ್ಟಿ, ಉದ್ಯಮಿಗಳಾದ ಗೋಪಾಲಕೃಷ್ಣ ಕಲ್ಮಕ್ಕಿ, ಗುರುರಾಜ್ ಶೆಟ್ಟಿ, ಸುರಭಿ ಬೈಂದೂರು ಅಧ್ಯಕ್ಷ ಶಿವರಾಮ ಕೊಠಾರಿ ಯಡ್ತರೆ, ನಿರ್ದೇಶಕ ಕೃಷ್ಣಮೂರ್ತಿ ಉಡುಪ ಉಪಸ್ಥಿತರಿದ್ದರು. ಸುರಭಿಯ ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ತಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಪೋಷಕ ಪ್ರತಿನಿಧಿ ಸರಸ್ವತಿ ಹುದಾರ್ ಸ್ವಾಗತಿಸಿ, ಸಲಹೆಗಾರ ತಿಮ್ಮಪ್ಪಯ್ಯ ಜಿ. ವಂದಿಸಿದರು. ನಿರ್ದೇಶಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.  ಬಳಿಕ ರಾಜೇಂದ್ರ ಕಾರಂತ್ ರಚಿಸಿ, ಯೋಗೀಶ್ ಬಂಕೇಶ್ವರ ನಿರ್ದೇಶಿಸಿ ರಂಗಸುರಭಿ ಕಲಾವಿದರು ಅಭಿನಯಿಸಿದ ‘ನಮ್ಮ ನಿಮ್ಮೊಳಗೊಬ್ಬ’ ನಾಟಕ ಪ್ರದರ್ಶನಗೊಂಡಿತು.

Exit mobile version