Kundapra.com ಕುಂದಾಪ್ರ ಡಾಟ್ ಕಾಂ

ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ವಾರ್ಷಿಕ ಕ್ರೀಡಾಕೂಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಮೇರಿಕಾದಂತಹ ಶ್ರೀಮಂತ ದೇಶಗಳಲ್ಲಿ ಹೆಚ್ಚು ಪ್ರಚಾರದಲ್ಲಿರುವ ಸಾಫ್ಟ್‌ಬಾಲ್‌ನಂತಹ ಕ್ರೀಡೆಯನ್ನು ಕುಂದಾಪುರ ಪರಿಸರಕ್ಕೆ ಪರಿಚಯಿಸಿ, ಸಾಫ್ಟ್‌ಬಾಲ್ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಕಾಲೇಜಿನ ಸಾಧನೆ ಸ್ತುತ್ಯಾರ್ಹ. ವಿದ್ಯಾರ್ಥಿಗಳು ಜೀವನಕ್ಕೆ ಎಲ್ಲಿ ಬೆಲೆ ಸಿಗುತ್ತದೆಯೋ ಅಲ್ಲೇ ತಮ್ಮ ಗುರಿಯ ಸಾಧನೆಗೆ ಅಂಕುರ ಸ್ಥಾಪಿಸಬೇಕು. ಸಧೃಡ ಯುವಜನತೆಯ ಸೃಷ್ಟಿಗೆ ಕ್ರೀಡೆ ಸಹಕಾರಿ ಎಂದು ಉಡುಪಿ ಪೂರ್ಣಪ್ರಜ್ಞಾ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ಹೇಳಿದರು.

ಅವರು ಕುಂದಾಪುರ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ೨೦೧೬-೧೭ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎಮ್. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಸೀತರಾಮ ನಕ್ಕತ್ತಾಯ, ವೈದ್ಯಾಧಿಕಾರಿ ಡಾ. ಹೆಚ್. ಎಸ್. ಮಲ್ಲಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ.ಎನ್. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ್ರೀಡಾ ಕಾರ್ಯದರ್ಶಿ ಆಶ್ರಿತ್ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಅದೇ ದಿನ ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ತಾಲೂಕು ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬಹುಮಾನ ವಿತರಿಸಿದರು. ದ್ವಿತೀಯ ಬಿ.ಕಾಂ. ’ಬಿ’ ವಿಭಾಗದ ಶೈಲೇಶ್, ಅಂತಿಮ ಬಿ.ಕಾಂ. ’ಬಿ’ ವಿಭಾಗದ ಭಾರ್ಗವಿ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಹಾಗೂ ಅಂತಿಮ ಬಿ.ಕಾಂ.’ಎ’ ಮತ್ತು ’ಬಿ’ ವಿಭಾಗದ ವಿದ್ಯಾರ್ಥಿಗಳು ಕ್ರಮವಾಗಿ ಪ್ರಥಮ, ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಚೇತನ್ ಶೆಟ್ಟಿ ಕೋವಾಡಿ ಕಾರ್ಯಕ್ರಮ ನಿರೂಪಿಸಿದರು.

Exit mobile version