ಕುಂದಾಪ್ರ ಡಾಟ್ ಕಾಂ ಸುದ್ದಿ
ಸಿದ್ದಾಪುರ: ಗುಡಿಯೊಳಗಿನ ದೇವರಲ್ಲಿನ ನಂಬಿಕೆಯಂತೆ ದೇಹದ ಆತ್ಮದೊಳಗಿನ ನಂಬಿಕೆಯು ಪವಿತ್ರವಾದದ್ದು. ಧಾರ್ಮಿಕ ಆಚರಣೆಗಳಲ್ಲಿ ಪರಿಶುದ್ಧತೆ ಆವಶ್ಯ. ಮಕ್ಕಳಿಗೆ ಶಿಕ್ಷಣದ ಆವಶ್ಯಕತೆಯಂತೆ ಧಾರ್ಮಿಕತೆಯ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ಹೇಳಿದರು.
ಅವರು ಕೊಂಜಾಡಿ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿ ಮಾತನಾಡಿದರು.
ಹಿಂದೂ ಧರ್ಮ ಶ್ರೇಷ್ಠವಾದದ್ದು. ಮಕ್ಕಳಲ್ಲಿ ಧಾರ್ಮಿಕತೆಯ ವಾಸ್ತವದ ವಿಚಾರಗಳ ಅರಿವಿನ ಕೊರತೆಯಿಂದ, ಧರ್ಮಕ್ಕೆ ಹಿನ್ನಡೆಯಾಗುತ್ತಿದೆ. ಹಿಂದೆ ವೃದ್ಧಾಶ್ರಮಗಳಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಜನತೆಯಲ್ಲಿ ಸಂಸ್ಕಾರ ಹಾಗೂ ಜೀವನ ಮೌಲ್ಯಗಳ ಕೊರತೆಯಿಂದಾಗಿ ಹಿರಿಯರ ಬಗ್ಗೆ ಗೌರವವಿಲ್ಲದೆ. ಇದರ ಪರಿಣಾಮ ಹಿರಿಯರನ್ನು ವೃದ್ಧಾಶಮಕ್ಕೆ ಸೇರಿಸುತ್ತಿರುವುದು ವಿಷಾದನೀಯ. ದೇವಸ್ಥಾನಗಳು ಕೇವಲ ಪೂಜೆ ಹಾಗೂ ಧಾರ್ಮಿಕ ಆಚರಣೆಗಳಿಗೆ ಸಿಮೀತವಾಗದೆ, ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಯ ಚಟುವಟಿಕೆಗಳೊಂದಿಗೆ ಸಮಾಜದ ಕುಂದು ಕೊರತೆಗಳಿಗೆ ಸ್ವಂದಿಸುವ ಕೇಂದ್ರಗಳಾಗಬೇಕು ಎಂದು ಹೇಳಿದರು.
ಕೊಂಜಾಡಿ ಶ್ರೀ ದುರ್ಗಾಪರಮೇಶ್ವರೀ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ. ಪ್ರಶಾಂತ ಶೆಟ್ಟಿ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ವೆ ಉದ್ಯಮಿ ಬಿ. ಗಣೇಶ ಕಿಣಿ ಬೆಳ್ವೆ, ನಿವೃತ್ತ ಶಿಕ್ಷಕ ಪ್ರಭಾಕರ ಶೆಟ್ಟಿ ಕೊಂಜಾಡಿ, ಬೆಳ್ವೆ ಶ್ರೀ ಶಂಕರನಾರಾಯಣ ದೇಗುಲದ ಮೊಕ್ತೇಸರ ಶಂಕರ ಶೆಟ್ಟಿ ಬೆಳ್ವೆ, ಧಾರ್ಮಿಕ ಮುಖಂಡ ವಿಜಯ ಕುಮಾರ್ ಶೆಟ್ಟಿ ಗೋಳಿಯಂಗಡಿ, ಆಡಳಿತ ಅಧಿಕಾರಿ ಆನಂದ, ವ್ಯವಸ್ಥಾಪನಾ ಸಮಿತಿ, ಗ್ರಾಮಸ್ಥರು, ತಂತ್ರಿಗಳು, ಅರ್ಚಕರು, ಕೊಂಜಾಡಿ ಶ್ರೀ ದುರ್ಗಾಪರಮೇಶ್ವರೀ ಭಜನ ಮಂಡಳಿ, ಮಹಿಳಾ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದರು.
ಈ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಪಟು ಬೆಳ್ವೆ ಶಾಲೆಯ ವಿದ್ಯಾರ್ಥಿನಿ ಅನಿತಾ ಆರ್., ಭಗವದ್ಗೀತ ಪ್ರಶಸ್ತಿ ವಿಜೇತೆ ಅಶ್ವಿನಿ ಕೊಂಜಾಡಿ, ಪ್ರಗತಿಪರ ಕೃಷಿಕ ಮೋಹನ ನಾಯ್ಕ ಹಾಡಿಮನೆ, ಪ್ರಗತಿಪರ ಹೈನುಗಾರ ಕರುಣಾಕರ ಶೆಟ್ಟಿ ಕಲ್ಮಕ್ಕಿ, ಸೇವಾ ಕ್ಷೇತ್ರದಲ್ಲಿ ಬೇಬಿ ಗಂಟುಬೀಳು, ನಾಟಿ ವೈದ್ಯ ರಾಜು ಕೊಠಾರಿ ಕೊಂಜಾಡಿ ಅವರುಗಳನ್ನು ದೇಗುಲದ ಪರವಾಗಿ ಈಶ ವಿಟuಲದಾಸ ಸ್ವಾಮೀಜಿ ಸಮ್ಮಾನಿಸಿದರು. ದೇಗುಲದ ಬ್ರಹ್ಮಕಲಶೋತ್ಸವದಲ್ಲಿ ಸೇವೆ ಸಲ್ಲಿಸಿದ ಆನಂದ, ಪ್ರವೀಣ ಶೆಟ್ಟಿ, ಸತೀಶ್ಚಂದ್ರ ಹೆಗ್ಡೆ, ನರಸಿಂಹ ಆಚಾರ್ಯ, ಸೇವಾ ಪ್ರತಿನಿಧಿ ಸುಶ್ಮಿತಾ, ದಯಾನಂದ ಕಬ್ಬಿನಾಲೆ ಅವರುಗಳನ್ನು ಅಭಿನಂದಿಸಲಾಯಿತು. ವೇ| ಮೂ| ಸದಾಶಿವ ಭಟ್ ಬೇಳಂಜೆ ಹಾಗೂ ಅರ್ಚಕ ಅರುಣಾಚಲ ಜೋಯಿಸ್ ನೇತೃತ್ವದಲ್ಲಿ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಗಳು ನಡೆದವು. ಸುದರ್ಶನ ಶೆಟ್ಟಿ ಆರ್ಡಿ ಸ್ವಾಗತಿಸಿ, ಧಾರ್ಮಿಕ ಮುಖಂಡ ವೈ. ವಿಜಯ ಕುಮಾರ್ ಶೆಟ್ಟಿ ಪ್ರಸ್ತಾವಿಸಿದರು. ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿ, ಗಣೇಶ್ ಆಚಾರ್ಯ ಆರ್ಡಿ ವಂದಿಸಿದರು.