Kundapra.com ಕುಂದಾಪ್ರ ಡಾಟ್ ಕಾಂ

ಗುರು ಹಿರಿಯರ ಮೇಲೆ ವಿಶ್ವಾಸವನ್ನಿಟ್ಟರೇ ಸುಖ ಶಾಂತಿ ನೆಮ್ಮದಿ: ಪರ್ತಗಾಳಿ ಶ್ರೀ

?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಮನುಷ್ಯ ಜೀವನದಲ್ಲಿ ದೇವರನ್ನು ನಿರಂತರ ಸ್ಮರಿಸಿ ಆರಾಧಿಸಿ ಪೂಜಿಸುವುದರಿಂದ ಜೀವನವು ಅಭಿವೃದ್ಧಿಗೊಂಡು ಸಾಕ್ಷಾತ್ಕಾರವಾಗುತ್ತದೆ. ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು ದೇವಾಲಯಗಳ ಮೂಲಕ ಮನುಷ್ಯ ಜನ್ಮ ಪಾವನವಾಗುತ್ತದೆ. ನಮ್ಮ ಜೀವನದ ನಿಯಮವನ್ನು ಉಲ್ಲಂಘಿಸಿದರೆ ಯಾವುದೇ ಪುಣ್ಯ ಪ್ರಾಪ್ತಿಯಾಗುವುದಿಲ್ಲ ಹಾಗೂ ಜೀವನದಲ್ಲಿ ಆನಂದವೂ ದೊರೆಯುವುದಿಲ್ಲ. ಇದನ್ನು ಅರಿತು ಜೀವನ ನಡೆಸಿದರೆ ಮತ್ತು ಭಕ್ತಿಭಾವದಿಂದ ದೇವರನ್ನು ಗುರುಗಳನ್ನು ನಿತ್ಯನಿರಂತವಾಗಿ ಸ್ಮರಿಸಿಕೊಂಡರೆ ನಮ್ಮ ಜೀವನದ ಎಲ್ಲಾ ಸಂಕಷ್ಟಗಳು ದೂರವಾಗಿ ಆನಂದಮಯ ಜೀವನ ಪ್ರಾಪ್ತಿಯಾಗುತ್ತದೆ ಎಂದು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಹೇಳಿದರು.

ಅವರು ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಚಿತ್ತೈಸಿ ಆಶೀರ್ವಚನ ನೀಡಿ ಮಾತನಾಡಿದರು. ಐದು ನದಿಗಳ ಸಂಗಮ ತಾಣವಾಗಿರುವ ಗಂಗೊಳ್ಳಿಯ ಪುಣ್ಯಕ್ಷೇತ್ರದಲ್ಲಿರುವ ಸುಮಾರು ೩೫೦ ವರ್ಷ ಇತಿಹಾಸವಿರುವ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನವು ಶ್ರೀ ಮಠದ ಶಾಖಾ ಮಠವಾಗಿದ್ದು ಪಂಚಪರ್ವಾದಿ ಉತ್ಸವಗಳು ಅತಿ ವಿಜೃಂಭಣೆಯಿಂದ ಗುರುಗಳ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಸಮಾಜದ ಜನರು ಪ್ರೀತಿ ವಿಶ್ವಾಸದಿಂದ ಗುರು ಹಿರಿಯರ ಮೇಲೆ ವಿಶ್ವಾಸವನ್ನಿಟ್ಟು ನಡೆದುಕೊಂಡರೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯಲಿದೆ ಎಂದು ಅವರು ಹರಸಿದರು.

ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಪುತ್ತು ಪೈ ಭಟ್ಕಳ ಮಾತನಾಡಿದರು. ದೇವಳದ ಆಡಳಿತ ಮಂಡಳಿ ಕಾರ್ಯದರ್ಶಿ ಜಿ.ವೆಂಕಟೇಶ ನಾಯಕ್ ಮತ್ತು ಖಜಾಂಚಿ ವೇದಮೂರ್ತಿ ಜಿ.ವೇದವ್ಯಾಸ ಆಚಾರ್ಯ ಗುರುವರ್ಯರ ಪಾದಪೂಜೆ ನೆರವೇರಿಸಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ, ದೇವಳದ ತಾಂತ್ರಿಕ ವೇದಮೂರ್ತಿ ಜಿ.ವಸಂತ ಭಟ್, ವೇದಮೂರ್ತಿ ಜಿ.ನಾರಾಯಣ ಆಚಾರ್ಯ, ವೇದಮೂರ್ತಿ ಜಿ.ಅನಂತಕೃಷ್ಣ ಭಟ್, ಎಂ.ರಾಮಕೃಷ್ಣ ಪೈ, ಕೆ.ಗೋಪಾಲಕೃಷ್ಣ ನಾಯಕ್, ಜಿ.ಎಸ್.ಕಾಮತ್ ಕುಮಟಾ, ವೈದಿಕರು, ಪುರೋಹಿತರು, ಆಡಳಿತ ಮಂಡಳಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

ದೇವಳದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಷ್ಯ ಸ್ವೀಕಾರದ ಬಳಿಕ ತಮ್ಮ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಜೊತೆ ದೇವಳಕ್ಕೆ ಆಗಮಿಸಿದ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರನ್ನು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಬಳಿಯಿಂದ ಪುಣ್ಯಕುಂಭ ಸ್ವಾಗತದೊಂದಿಗೆ ಪುರಮೆರವಣಿಗೆ ಮೂಲಕ ಭಕ್ತಿಪೂರ್ವಕವಾಗಿ ಭವ್ಯವಾಗಿ ಸ್ವಾಗತಿಸಿಕೊಳ್ಳಲಾಯಿತು. ಸಮಾಜದ ಮಕ್ಕಳ ಹುಲಿವೇಷ, ಮಹಿಳೆಯರ ಚಂಡೆ ವಾದನ ಮೊದಲಾದವುಗಳು ಪುರಮೆರವಣಿಗೆಯ ಮೆರಗು ಹೆಚ್ಚಿಸಿತು.

Exit mobile version