ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸ್ವಂತ ಮನೆ ಭೂಮಿ ಇಲ್ಲದವರಿಗೆ ನಿವೇಶನ ಹಕ್ಕು ಪತ್ರ ಕೊಡಲು ಸರಕಾರವನ್ನು ಒತ್ತಾಯಿಸಿ ಗ್ರಾಮಾಂತರ ಪ್ರದೇಶದಲ್ಲಿ ನಿವೇಶನ ರಹಿತರ ಸಮಾವೇಶವನ್ನು ಅಯೋಜಿಸಲಾಗಿದ್ದು, ಬೈಂದೂರು ಮತ್ತು ಕುಂದಾಪುರ ಶಾಸಕರ ಮನೆ ಮುಂದೆ ಭೂಮಿ ಹಕ್ಕಿಗಾಗಿ ಧರಣಿ ಮುಷ್ಕರ ನಡೆಸುವುದಕ್ಕೆ ಪೂರ್ವಭಾವಿ ಸಭೆಯನ್ನು ಕುಂಭಾಶಿ ಗ್ರಾಮ ಪಂಚಾಯತ್ ಕಛೇರಿ ಬಳಿ ಅಂಬೇಡ್ಕರ್ ಭವನ ವಠಾರದಲ್ಲಿ ನಡೆಸಲಾಯಿತು. ಮನೆ ನಿವೇಶನ ರಹಿತರ ಬೃಹತ್ ಸಮಾವೇಶವನ್ನು ಕೃಷಿ ಕೂಲಿಕಾರರ ಸಂಘದ ನಾಗರತ್ನ ನಾಡರವರು ಉದ್ಘಾಟಿಸಿ ಮಾತನಾಡುತ್ತಾ, ಶಾಸಕರ ಮನೆ ಮುಂದೆ ಜರಗಲಿರುವ ಧರಣಿ ಮುಷ್ಕರವನ್ನು ಯಶಸ್ವಿಗೊಳಿಸಲು ಕರೆಕೊಟ್ಟರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ನಿವೇಶನ ರಹಿತರು ನಿವೇಶನ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿ, ಮೂರು ವರ್ಷ ಕಳೆದರೂ ಈ ತನಕ ಸರಕಾರಿ ಭೂಮಿಯನ್ನು ಗುರುತಿಸದ ಕಂದಾಯ ಇಲಾಖೆಯ ಕ್ರಮವನ್ನು ಖಂಡಿಸಿದರು. ಸಭೆಯಲ್ಲಿ ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಕರಿಯ ದೇವಾಡಿಗ ಕೋಟೇಶ್ವರ, ಪದ್ಮಾವತಿ ಶೆಟ್ಟಿ, ಕುಶಲ, ಶೀಲಾವತಿ, ಉಪಸ್ಥಿತರಿದ್ದರು. ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಯ ದಿನೇಶ ಇವರು ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.