Kundapra.com ಕುಂದಾಪ್ರ ಡಾಟ್ ಕಾಂ

ಬಳ್ಕೂರು ಸಮೀಪದ ಕುದ್ರುವಿಗೆ ಬೆಂಕಿ. ಮರಮಟ್ಟುಗಳು ಆಹುತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಬಳ್ಕೂರು ಕಾರಿಕುದ್ರು, ಗುಲ್ವಾಡಿ, ಕಂಡ್ಲೂರು ನಡುವೆ ವರಾಹಿ ನದಿಯಲ್ಲಿರುವ ನೈಸರ್ಗಿಕ ಕುದ್ರುವಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸುಮಾರು ೩೦ ಎಕರೆ ಪ್ರದೇಶದಲ್ಲಿರುವ ಬೆಲೆಬಾಳುವ ಮರಮಟ್ಟುಗಳು ಬೆಂಕಿಗಾಹುತಿಯಾದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ಸುತ್ತಲೂ ನೀರಿನಿಂದಾವೃತವಾಗಿರುವ ಹಿನ್ನೆಲೆ ಈ ಸ್ಥಳಕ್ಕೆ ಅಗ್ನಿಶಾಮಕ ವಾಹನ ತೆರಳಲು ಸಾಧ್ಯವಾಗದೇ, ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರಾದರೂ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿರಲಿಲ್ಲ. ನಂತರ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂದು ಬೆಂಕಿ ಸತತ ಎರಡು ಗಂಟೆಗಳ ಕಾರ‍್ಯಾಚರಣೆ ನಡೆಸಿದ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ.

ಅಕ್ರಮ ಮರಳುಗಾರಿಕೆ ನಡೆಸುವವರ ಸಂಚು?
ಕುದ್ರಿವಿನಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಮರಳುಗಾರಿಕೆಗೆ ಗಿಡ ಗಂಟಿಗಳು ತೊಂದರೆ ನೀಡುತ್ತದೆ ಎನ್ನುವ ಕಾರಣಕ್ಕೆ ಮರಳು ಕಾರ್ಮಿಕರ ಮೂಲಕ ದಂಧೆಕೋರರು ಇಡೀ ಕುದ್ರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸಂಬಂಧ ಅಲ್ಲಿದ್ದ ಕಾರ್ಮಿಕರನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು ಬಿಡುಗಡೆಗೊಳಿಸಿದೆ. ತನಿಕೆಯ ವೇಳೆ ಮರಳು ಕಾರ್ಮಿಕರ ಪಾತ್ರವಿಲ್ಲ ಎಂದು ತಿಳಿದು ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version