ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಉಡುಪಿ ನೃತ್ಯನಿಕೇತನ ಆಶ್ರಯದಲ್ಲಿ ಡಾ.ಮಾಳವಿಕ ಹೆಬ್ಬಾರ್ ರಂಗಪ್ರವೇಶ ಮಾರ್ಚ್ ೫, ಸಂಜೆ ೫ಕ್ಕೆ ಭಂಡಾರ್‌ಕಾರ‍್ಸ್ ಕಾಲೇಜು ಆರ್. ಎನ್. ಶೆಟ್ಟಿ ಹಾಲ್‌ನಲ್ಲಿ ನಡೆಯಲಿದೆ ಎಂದು ಡಾ. ಎಚ್. ಆರ್. ಹೆಬ್ಬಾರ್ ತಿಳಿಸಿದರು.
ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜ್‌ನಲ್ಲಿ ಮೆಡಿಕಲ್ ಜೆನೆಟಿಕ್ಸ್ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಡಾ.ಮಾಳವಿಕಾ ಹೆಬ್ಬಾರ್ ತನ್ನ ವ್ಯಾಸಂಗದ ಜೊತೆಗೆ ಲಲಿತಕಲಾಪ್ರಕಾರಕ್ಕೂ ಸಮಯ ಹೊಂದಾಣಿಕೆ ಮಾಡಿಕೊಳ್ಳುತ್ತ ಉಡುಪಿ ನೃತ್ಯನಿಕೇತನ ವಿದುಷಿ ಲಕ್ಷ್ಮೀಗುರುರಾಜರಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಹಿತಿ ಮತ್ತು ರಂಗನಿರ್ದೇಶಕ ಪ್ರೊ.ಉದ್ಯಾವರ ಮಾಧವ ಆಚಾರ್ಯ ಭಾಗವಹಿಸಲಿದ್ದು, ಜಿಲ್ಲಾ ನ್ಯಾಯಧೀಶ ರಾಜಶೇಖರ ವಿ.ಪಟೀಲ್, ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮೆಡಿಕಲ್ ಜೆನೆಟಿಕ್ಸ್ ವಿಭಾಗ ಡಾ.ಗಿರೀಶ್ ಕಟ್ಟ ಭಾಗವಹಿಸಲಿದ್ದಾರೆ. ವಿದುಷಿ ಲಕ್ಷ್ಮೀ ಗುರುರಾಜ, ವಿದುಷಿ ಶೃದ್ದಾ ಎನ್ ಭಟ್, ವಸಂತಿ ಶ್ರೀನಿವಾಸ ಆಚಾರ್ಯ, ಪ್ರದೀಪ ಆಚಾರ್ಯ ಅವರ ಸನ್ಮಾನಿಸಲಾಗುವುದು ಎಂದರು.
ಶಾಸ್ತ್ರೀಯ ನೃತ್ಯ-ಭರತನಾಟ್ಯದ ವಿದ್ಯಾರ್ಥಿಯ ಪದೋನ್ನತಿಯನ್ನು ’ಆರಂಗೇಟ್ರ’ ಅಥವಾ ’ರಂಗಪ್ರವೇಶ’ಎಂದು ಕರೆಯುತ್ತಾರೆ. ನೃತ್ಯಗುರು ತನ್ನು ವಿದ್ಯಾರ್ಥಿ ವೇದಿಕೆಯ ಮೇಲೆ ಕಲಾ ಪ್ರದರ್ಶನಕ್ಕೆ ಯೋಗ್ಯ ಎನ್ನುವುದನ್ನು ಪ್ರಸ್ತುತ ಪಡಿಸುವ ಪ್ರಕ್ರಿಯೆಯೇ ರಂಗ ಪ್ರವೇಶ. ಈ ಪ್ರದರ್ಶನವು ಭರತನಾಟ್ಯ ಮಾರ್ಗವನ್ನು ಅನುಸರಿಸಯತ್ತದೆ. ಮಾರ್ಗ ಅಂದರೆ ಪ್ರಸ್ತುತ ಪಡಿಸುವ ನೃತ್ಯದ ಕ್ರಮಾನುಸರಣಿಕೆ. ರಂಗ ಪ್ರವೇಶವು ಹಲವಾರು ವರ್ಷಗಳ ತರಬೇತಿ, ಕಲಿಕೆಯ ನಂತರ ನಡೆಯುತ್ತದೆ ಎಂದು ಅವರು ವಿವರಿಸಿದರು. ಸುದ್ಧಿಗೋಷ್ಠಿಯಲ್ಲಿ ಡಾ. ಪುಷ್ಪಗಂಧಿನಿ, ಡಾ. ಅಲಕ ಉಪಸ್ಥಿತರಿದ್ದರು.