ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕ್ರೀಯಾಶೀಲ ಚಿಂತನೆಯೊಂದಿಗೆ ತನ್ನದೇ ವೈಶಿಷ್ಟ್ಯವನ್ನು ಹೊಂದಿರುವ ಮಾತಾ ಮೊಂಟೆಸ್ಟೋರಿಯ ಈ ವರ್ಷದ ಕ್ರೀಡೋತ್ಸವ ಕೋಡಿಯ ದ್ವೀಪ ಸ್ತಂಭದ ಬಳಿ ಕಡಲ ತೀರದಲ್ಲಿ ಜರುಗಿತು.
ಕ್ರೀಡೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಕಳೆದ ೭ ವರ್ಷಗಳಿಂದ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ತೋರಿದ ಬದ್ಧತೆ ಹಾಗೂ ಅದರ ಉಪಯೋಗವನ್ನು ಪಡೆದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಮಕ್ಕಳನ್ನು ಕೇವಲ ಪುಸ್ತಕದೊಂದಿಗೆ ಏಕತಾನತೆಗೆ ಒಳಪಡಿಸದೆ ಅವರ ದೈಹಿಕ ಮಾನಸಿಕ ಧೃಢತೆಗೆ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿರುವ ಪೋಷಕರು ಅಭಿನಂದನಾರ್ಹರು ಎಂದು ನುಡಿದರು.
ವಿವಿಧ ವಯೋಮಿತಿಯಲ್ಲಿ ನಡೆದ ಕ್ರೀಡಾ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ ಪುಟಾಣಿಗಳು ಆನಂದಕ್ಕೆ ಪಾರವೇ ಇರಲಿಲ್ಲ. ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದ ಹಿರಿಯ ವಿದ್ಯಾರ್ಥಿಗಳಿಗೂ ವಿಶೇಷವಾಗಿ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿತ್ತು. ಪೋಷಕರಿಗಾಗಿ ಹಮ್ಮಿಕೊಂಡ ಕ್ರೀಡಾ ಚಟುವಟಿಕೆಗಳು ವಿಶೇಷವಾಗಿ ತಂದೆ ತಾಯಿಯರ ಮೂರು ಕಾಲಿನ ಓಟ ಮುದ್ದು ಮಕ್ಕಳ ಮನಸ್ಸಿಗೆ ಇನ್ನಷ್ಟು ಆಹ್ಲಾದ ನೀಡಿದವು. ಮಕ್ಕಳೊಂದಿಗೆ ಪೋಷಕರೂ ಸೇರಿ ದ್ವೀಪ ಸ್ತಂಭವೇರಿ ಕುಂದಾಪುರದ ವಿಹಂಗಮ ನೋಟವನ್ನು ಸವಿಯಲು ಏರ್ಪಾಡು ಮಾಡಲಾಗಿತ್ತು. ಈ ಸಂದರ್ಭದಲ್ಲಿ
ಮಾತಾ ಮೊಂಟೆಸ್ಟೋರಿಯ ಪ್ರಾಂಶುಪಾಲೆ ಭಾರತಿ ಪ್ರಕಾಶ್ ಶೆಟ್ಟಿ, ಶಿಕ್ಷಕಿಯರಾದ ಸುಮಿತ್ರಾ, ಗೀತಾ ಶೆಟ್ಟಿ, ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. ಪ್ರಭಾವ್, ಶಕ್ತಿ ಹಾಗೂ ಸುಧಾಕರ ಶೆಟ್ಟಿ ಸಹಕರಿಸಿದರು.