Kundapra.com ಕುಂದಾಪ್ರ ಡಾಟ್ ಕಾಂ

ಕೊಲೆ ಸುಪಾರಿ ನೀಡಿದ ಆರ್ ಎಸ್ ಎಸ್ ಮುಖಂಡನ ಬಂಧನವಾಗಲಿ: ಕುಂದಾಪುರದಲ್ಲಿ ಸಿಪಿಎಂ ಆಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೊಲೆಗೆ ಒಂದು ಕೋಟಿ ರೂಪಾಯಿ ಸುಫಾರಿ ನೀಡುವುದಾಗಿ ಪರೋಕ್ಷವಾಗಿ ಹೇಳಿಕೆಕೊಟ್ಟ ಆರ್ ಎಸ್ ಎಸ್ ಮುಖಂಡ ಚಂದ್ರಾವತ್ ಬಂಧನವಾಗದಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ಇಂತಹವರನ್ನು ಪ್ರಧಾನಿಗಳು ರಕ್ಷಿಸುತ್ತಿದ್ದಾರೆ. ದೇಶದ ಐಕ್ಯತೆ, ಸಮಗ್ರತೆಗೆ ಕೆಡುಕುಂಟು ಮಾಡುತ್ತಿರುವವರೆ ದೇಶದ ಚುಕ್ಕಾಣಿಯಂತೆ ಹಿಡಿದರೆ ದೇಶವಾಸಿಗಳ ಪರಿಸ್ಥಿತಿ ಏನಾಗಬಹುದು ಎಂಬುವುದು ಸೂಚನೆ ದಿನದಿಂದ ದಿನಕ್ಕೆ ಗೋಚರಿಸುತ್ತಿದೆ. ಇಂತಹ ಕೊಲೆಗಡುಕ ಸಂಸ್ಕೃತಿ ಯನ್ನು ಎಲ್ಲರೂ ವಿರೋಧಿಸಬೇಕಾಗಿದೆ ಎಂದು ಕುಂದಾಪುರ ಸಿಪಿಎಂ ಮುಖಂಡ ಕಾಂ.ಹೆಚ್ ನರಸಿಂಹ ಹೇಳಿದರು.

ಅವರು ಕುಂದಾಪುರ ಶಾಸ್ತ್ರೀವೃತ್ತದಲ್ಲಿ ಭಾರತ ಕಮ್ಯೂನಿಷ್ಟ್ ಪಕ್ಷ ಕುಂದಾಪುರದ ನೇತೃತ್ವದಲ್ಲಿ ಪಿಣರಾಯಿ ವಿಜಯನ್ ಕೊಲೆಗೆ ಸುಫಾರಿ ನೀಡುವುದಾಗಿ ಹೇಳಿದ ಆರ್ ಎಸ್ ಎಸ್ ಮುಖಂಡನ ಹೇಳಿಕೆಯನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದರು.

ಸಿಪಿಎಂ ಕುಂದಾಪುರ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ ಕೇರಳವು ದೇಶದಲ್ಲೇ ಕೋಮು ಸೌಹಾರ್ದತೆಗೆ ಹೆಸರಾದ ರಾಜ್ಯವಾಗಿದೆ. ಈ ಸೌಹಾರ್ದತೆಗೆ ಸಿಪಿಎಂ ಪಕ್ಷದ ತ್ಯಾಗದಿಂದಾಗಿ ನೆಲೆಗೊಂಡಿದೆ. ಇಂತಹ ಸೌಹಾರ್ದತೆ ಹಾಳುಗೆಡೆದು ರಾಜಕೀಯ ಅಧಿಕಾರ ಪಡೆಯಲು ಆರ್ ಎಸ್ ಎಸ್ ಹಗಲು ರಾತ್ರಿ ಹರಸಾಹಸ ಪಡುತ್ತಿದೆ ರಾಜಕೀಯಕ್ಕಾಗಿ ಹಿಂದೂ ಪದ ದುರ್ಬಳಕೆ ಮಾಡಿಕೊಂಡು ಸಿಪಿಎಂ ಕಾರ್ಯಕರ್ತರ ಮೇಲೆ ಸುಳ್ಳು ಆಪಾದನೆ ಮಾಡಲಾಗುತ್ತಿದೆ ಎಂದರು. ಪ್ರತಿಭಟನೆಯಲ್ಲಿ ಸಿಪಿಎಂ ಪಕ್ಷದ ಪ್ರಮುಖರು ಭಾಗವಹಿಸಿದ್ದರು.

Exit mobile version