Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ ಮೀನುಗಾರಿಕಾ ಹೊರಬಂದರು ಸಮಸ್ಯೆ ಪರಿಹಾರಕ್ಕೆ ಕ್ರಮ: ಶಾಸಕ ಕೆ. ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮರವಂತೆ: ಮೀನುಗಾರಿಕಾ ಹೊರಬಂದರು ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಇದರಿಂದ ಮೀನುಗಾರರು ಬೇರೆಬೇರೆ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಸಂಬಂಧ ಗುತ್ತಿಗೆದಾರರಿಗೆ ನೋಟೀಸು ನೀಡಿ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಬಂದರು ನಿರ್ಮಾಣ ಪ್ರದೇಶಕ್ಕೆ ರವಿವಾರ ಭೇಟಿನೀಡಿದ ಅವರು ಸ್ಥಳೀಯ ಮೀನುಗಾರರನ್ನು ಉದ್ದೇಶಿಸಿ ಮಾತನಾಡಿದರು. ನಿಧಾನಗತಿಯ ಕಾಮಗಾರಿಯಿಂದ ಮೀನುಗಾರರಿಗೆ ಬಂದರಿನ ಲಾಭ ದೊರೆಯದಂತಾಗಿದೆ. ಅದರ ಪಶ್ಚಿಮದ ತಡೆಗೋಡೆ ಪೂರ್ತಿಯಾಗದಿರುವ ಕಾರಣ ಇಲ್ಲಿ ವರ್ಷವಿಡೀ ಕಡಲ್ಕೊರೆತ ಸಂಭವಿಸಿ ಮರಮಟ್ಟ, ಜಮೀನು ಸಮುದ್ರ ಪಾಲಾಗಿದೆ. ಮಳೆಗಾಲದಲ್ಲಿ ಪರಿಸ್ಥಿತಿ ಗಂಭೀರ ಸ್ವರೂಪ ತಾಳಿ ರಸ್ತೆ, ಮನೆಗಳಿಗೆ ಅಪಾಯ ಸಂಭವಿಸಲಿದೆ. ಗುತ್ತಿಗೆದಾರರ ವಾಹನ ಓಡಾಟದಿಂದ ಕರಾವಳಿ ಮಾರ್ಗ ಸಂಪೂರ್ಣ ಕೆಟ್ಟುಹೋಗಿದೆ. ಇವುಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಮೀನುಗಾರರು ಆಗ್ರಹಿಸಿದರು.

ಉಪಸ್ಥಿತರಿದ್ದ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕೆ. ಆರ್. ದಯಾಂದ ಅವರೊಂದಿಗೆ ಚರ್ಚಿಸಿ ಉತ್ತರಿಸಿದ ಶಾಸಕರು ಕಾಮಗಾರಿಯ ವೇಗ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಅದರ ಎರಡನೆ ಹಂತದ ಕಾಮಗಾರಿಗೆ ಸರ್ಕಾರದಿಂದ ರೂ ೨೪ ಕೋಟಿ ಮಂಜೂರಾತಿ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಯೋಜನಾ ಪ್ರದೇಶದ ಒಳಗೆ ರೂ ೫ ಕೋಟಿ ವೆಚ್ಚದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಲಾಗುವುದು. ಅದಕ್ಕೂ ಮುನ್ನ ಕೊರೆತ ತಡೆಗೆ ತಕ್ಷಣ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗುವುದು. ಕೆಟ್ಟು ಹೋಗಿರುವ ರಸ್ತೆಯನ್ನು ಸುನಾಮಿ ಮತ್ತು ಪ್ರವಾಸೋದ್ಯಮ ನಿಧಿಯಿಂದ ಹಣಪಡೆದು ಕಾಂಕ್ರೀಟ್ ರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗುವುದು. ಸದ್ಯ ಟಾರುಹಾಕಿ ಸಂಚಾರ ಯೋಗ್ಯ ಮಾಡಲಾಗುವುದು ಎಂದರು.

ಮೀನುಗಾರಿಕಾ ದೋಣಿ ಹೊಂದಲು ಬೇಡಿಕೆ ಸಲ್ಲಿಸಿದ ಎಲ್ಲರಿಗೆ ಕಾರ್ಯಸಾಧ್ಯತಾ ದೃಢೀಕರಣ ನೀಡಲಾಗುವುದು. ಬೈಂದೂರು ಕ್ಷೇತ್ರಕ್ಕೆ ೨೫೦ ಮೀನುಗಾರಿಕಾ ಮನೆ ಮಂಜೂರಾಗಿದ್ದು, ಮರವಂತೆಗೆ ೨೦ ಮನೆಗಳನ್ನು ನಿಗದಿಗೊಳಿಸಲಾಗಿದೆ ಎಂದರು.

ಮೀನುಗಾರರ ಸೇವಾ ಸಮಿತಿಯ ಮಾಜಿ ಕಾರ್ಯದರ್ಶಿ ಶ್ರೀಧರ ಖಾರ್ವಿ ಸ್ವಾಗತಿಸಿ, ವಂದಿಸಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಜನಾರ್ದನ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಬಿ. ರಘುರಾಮ ಶೆಟ್ಟಿ, ಗ್ರಾ. ಪಂ. ಮಾಜಿ ಅಧ್ಯಕ್ಷ ಎಂ. ವಿನಾಯಕ ರಾವ್, ಮಾಜಿ ಸದಸ್ಯರಾದ ಮೋಹನ ಖಾರ್ವಿ, ರಾಮಕೃಷ್ಣ ಖಾರ್ವಿ, ಗುತ್ತಿಗೆದಾರ ಗೋಕುಲ ಶೆಟ್ಟಿ, ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ವೆಂಕಟರಮಣ ಖಾರ್ವಿ, ಮಾಜಿ ಅಧ್ಯಕ್ಷರಾದ ಚಂದ್ರ ಖಾರ್ವಿ, ಸೋಮಯ್ಯ ಖಾರ್ವಿ, ಇಂಜಿನಿಯರ್ ವಿಜಯ ಶೆಟ್ಟಿ, ಡಯಾಸ್ ಉಪಸ್ಥಿತರಿದ್ದರು. ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಶಾಸಕರನ್ನು ಮೀನುಗಾರರ ಪರವಾಗಿ ಸನ್ಮಾನಿಸಲಾಯಿತು.

Exit mobile version