Kundapra.com ಕುಂದಾಪ್ರ ಡಾಟ್ ಕಾಂ

ನಾಕಟ್ಟೆಯ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಶಿಲನ್ಯಾಸ ವಿಧಿ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತುಳುನಾಡಿನ ವೀರಪುರುಷರೆನಿಸಿಕೊಂಡಿರುವ ಶ್ರೀ ಕೋಟಿ ಚೆನ್ನಯ್ಯರ ಕೊನೆಯ ಗರಡಿ ಬೈಂದೂರು ನಾಕಟ್ಟೆಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವುದು ಸಂತಸದ ವಿಷಯವಾಗಿದ್ದು, ಗರಡಿಯ ಜೀಣೋದ್ಧಾರ ಕಾರ್ಯ ನಿರ್ವಿಘ್ನವಾಗಿ ನಡೆದು, ಕೋಟಿ ಚೆನ್ನಯ್ಯರ ಕೃಪೆ ಭಕ್ತವರ್ಗಕ್ಕೆ ದೊರೆಯುವಂತಾಗಲಿ. ಗರಡಿ ನಿರ್ಮಾಣಕ್ಕೆ ಅಗತ್ಯವಾದ ನೆರವು ನೀಡಲು ಸಿದ್ಧನಿರುವುದಾಗಿ ಬೈಂದೂರು ಕ್ಷೇತ್ರದ ಶಾಸಕರಾದ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ಬೈಂದೂರು ನಾಕಟ್ಟೆಯ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಇದರ ನವೀಕೃತ ಗರ್ಭಗುಡಿಗೆ ಶಿಲನ್ಯಾಸ ವಿಧಿ ಪೂರೈಸಿ ಬಳಿಕ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ, ವೇ.ಮೂ ಕೇಂಜ ಶ್ರೀಧರ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಿ ಜಗತ್ತಿನಲ್ಲಿ ೮೪ಲಕ್ಷ ಜೀವರಾಶಿಗಳಿದ್ದು ಅವನ್ನು ಸಸ್ಯ, ಪ್ರಾಣಿ, ಮನುಷ್ಯರೆಂದು ವಿಂಗಡನೆ ಮಾಡಲಾಗಿದೆ. ಈ ಮೂರು ವಿಭಾಗದ ಜೀವರಾಶಿಯಲ್ಲಿಯೂ ದೇವರ ಅಂಶ ಇದೆ ಎಂದು ಹಿಂದೂ ಧರ್ಮ ಪ್ರತಿಪಾದನೆ ಮಾಡುತ್ತದೆ. ಎಲ್ಲಾ ಜೀವರಾಶಿಗಳಿಗಿಂತ ಮಾನವ ಜನ್ಮ ದೊಡ್ಡದು ಎನ್ನಲಾಗುತ್ತದೆ. ಜೀವನದಲ್ಲಿ ಮಾಡುವ ಸಂಪಾದನೆಯನ್ನು ಸದ್ವಿನಿಯೋಗಗೊಳಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ದೇವತಾ ಕಾರ್ಯ, ಸಮಾಜ ಕಾರ್ಯದಲ್ಲಿ ತೊಡಗಿಕೊಳ್ಳುವುದರಿಂದ ನೆಮ್ಮದಿಯ ಬದುಕು ನಮ್ಮದಾಗುತ್ತದೆ ಎಂದರು.

ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜನಾರ್ಧನ ತೋನ್ಸೆ, ಹಿಲಿಯಾಣ ಶ್ರೀ ಬ್ರಹ್ಮಬೈದರ್ಕಳ ಗರಡಿ ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ವೈ. ಕರುಣಾಕರ ಶೆಟ್ಟಿ ಯರುಕೋಣೆ, ಉಗ್ಯಲಬೆಟ್ಟು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಪ್ರಮುಖ ಸಂತೋಷ ಕೋಟ್ಯಾನ್, ಉದ್ಯಮಿ ಜಗನಾಥ ಶೆಟ್ಟಿ ನಾಕಟ್ಟೆ, ಬಸ್ರೂರು ಗರೋಡಿ ಪಾತ್ರಿ ಗೋಪಾಲ ಪೂಜಾರಿ, ಉದ್ಯಮಿ ಮಹೇಶ್ ಪೂಜಾರಿ ಮುಂಬೈ, ಮೊಗವೀರ ಸಮಾಜದ ಪ್ರಮುಖದಾದ ಮದನಕುಮಾರ್ ಉಪ್ಪುಂದ, ಗಾಣಿಗ ಸಮಾಜದ ಪ್ರಮುಖದ ನಾಗರಾಜ ಗಾಣಿಗ ಬಂಕೇಶ್ವರ, ಹಿರಿಯ ಮುಖಂಡರಾದ ಬಿ. ರಘುರಾಮ ಶೆಟ್ಟಿ, ಬ್ರಾಹ್ಮಣ ಪರಿಷತ್‌ನ ಪ್ರಮುಖರಾದ ವಿನಾಯಕ ರಾವ್, ಸ್ಥಳೀಯರಾದ ಆನಂದ ಶೆಟ್ಟಿ, ರಾಮಕ್ಷತ್ರಿಯ ಸಮಾಜದ ಪ್ರಮುಖರಾದ ಸುರೇಶ್ ಹೋಬಳಿದಾರ್, ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಯ ಅರ್ಚಕ ಕುಟುಂಬದ ಪ್ರಮುಖರಾದ ಮಂಜುನಾಥ ಪೂಜಾರಿ ಮೇಲ್ಹಿತ್ಲು, ಗರಡಿಯ ಪ್ರಮುಖರಾದ ಕೋಟಿ ಪೂಜಾರಿ, ಮಂಜಯ್ಯ ಪೂಜಾರಿ ಏಳಜಿತ ಮೊದಲಾದವರು ಉಪಸ್ಥಿತರಿದ್ದರು.

ಗರಡಿ ಜೀಣೋದ್ಧಾರಕ್ಕಾಗಿ ವಿವಿಧ ಮೊದಲ ಹಂತದಲ್ಲಿ ನೆರವು ನೀಡಿದ ವಿವಿಧ ಕುಟುಂಬಿಕರನ್ನು ಗೌರವಿಸಲಾಯಿತು. ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜೀಣೋದ್ಧಾರ ಸಮಿತಿ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷರಾದ ವೆಂಕಟ ಪೂಜಾರಿ ಧನ್ಯವಾದಗೈದರು. ಸಮಿತಿಯ ಶಿವರಾಮ ಪೂಜಾರಿ ಯಡ್ತರೆ ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ಸಸಿಹಿತ್ಲು, ಚಂದ್ರ ಪೂಜಾರಿ ಸಹಕರಿಸಿದರು.

Exit mobile version