Kundapra.com ಕುಂದಾಪ್ರ ಡಾಟ್ ಕಾಂ

ನಾವುಂದ: ಮಿಕ್ಸಿಂಗ್ ಪ್ಲಾಂಟ್ ವಿರುದ್ಧ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾವುಂದ ಗ್ರಾಮದ ಕಂತಿಹೊಂಡ ಎಂಬಲ್ಲಿನ 10 ಎಕ್ರೆ ಪ್ರದೇಶದಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಗುತ್ತಿಗೆದಾರ ಸಂಸ್ಥೆ ಐಆರ್‌ಬಿ ಇನ್ಫ್ರಾಸ್ಟ್ರಕ್ಚರ್ ಡೆವಲಪರ‍್ಸ್ ಸ್ಥಾಪಿಸಿರುವ ಮಿಕ್ಸಿಂಗ್ ಪ್ಲಾಂಟ್‌ನಿಂದ ಪರಿಸರದ ನಿವಾಸಿಗಳಿಗೆ ಆಗುತ್ತಿರುವ ತೊಂದರೆಯ ವಿರುದ್ಧ ಪ್ರತಿಭಟನೆ ನಡೆಯಿತು.

ಸಂಸ್ಥೆ ಈ ನಿವೇಶನದಲ್ಲಿ ಸಾಮಗ್ರಿ ದಾಸ್ತಾನು ಮಾಡಲಾಗುವುದೆಂದು ತಿಳಿಸಿ, ಆ ಉದ್ದೇಶಕ್ಕೆ ಗ್ರಾಮ ಪಂಚಾಯಿತಿಯ ಅನುಮತಿ ಪಡೆದಿತ್ತು. ಆದರೆ ಅಲ್ಲಿ ಬೃಹತ್ ಯಂತ್ರ್ರಗಳನ್ನು ಸ್ಥಾಪಿಸಿಕೊಂಡು ಜಲ್ಲಿ ಪುಡಿ ಮಾಡಲಾಗುತ್ತಿದೆ. ಜಲ್ಲಿ ಮತ್ತು ಟಾರು ಬೆರೆಸಲಾಗುತ್ತಿದೆ. ಜಲ್ಲಿಪುಡಿ ಮತ್ತು ಜಲ್ಲಿ ಬೆರೆಸಿ ವೆಟ್ ಮಿಕ್ಷ್ಚರ್ ತಯಾರಿಸಲಾಗುತ್ತಿದೆ. ಇಲ್ಲಿ ಸೃಷ್ಟಿಯಾಗುವ ಜಲ್ಲಿ, ಸಿಮೆಂಟಿನ ಧೂರು ಇಡೀ ಪರಿಸರವನ್ನು ವ್ಯಾಪಿಸಿ, ಮನೆಗಳಿಗೆ ಪ್ರವೇಶಿಸುತ್ತದೆ. ಉಸಿರಾಟದೊಂದಿಗೆ ಜನರ ದೇಹ ಪ್ರವೇಶಿಸುವ ಈ ಧೂಳಿನಿಂದ ಹಲವರಲ್ಲಿ ಕೆಮ್ಮು, ಉಬ್ಬಸ ಕಾಣಿಸಿಕೊಂಡಿದೆ. ಸಾಮಗ್ರಿಗಳ ಅವಿರತ ಸಾಗಾಟಕ್ಕಾಗಿ ಸಂಸ್ಥೆ ಬಳಸಿಕೊಳ್ಳುತ್ತಿರುವ ಅರೆಹೊಳೆ-ಉಳ್ಳೂರು ರಸ್ತೆ ಸಂಪೂರ್ಣ ಕೆಟ್ಟುಹೋಗಿದ್ದು, ಸಣ್ಣ ವಾಹನ, ಜನ ಸಂಚಾರ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯಿತು.

ತಾಲ್ಲೂಕು ಪಂಚಾಯತ್ ಸದಸ್ಯ ಜಗದೀಶ ದೇವಾಡಿಗ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ ದೇವಾಡಿಗ, ದಿನೇಶ ಆಚಾರ್, ಮಾಜಿ ಸದಸ್ಯರಾದ ಕಿಶೋರ್ ಶೆಟ್ಟಿ, ಮತ್ತಿತರರು ಸಂಸ್ಥೆಯ ಪ್ಲಾಂಟ್ ಕಚೇರಿ ಎದುರು ವಿರೋಧ ವ್ಯಕ್ತಪಡಿಸಿದರು. ಅವರ ವಾಹನಗಳು ಪ್ಲಾಂಟ್ ಪ್ರವೇಶಿಸುವುದಕ್ಕೆ ತಡೆಯೊಡ್ಡಿದರು. ಸಂಸ್ಥೆಯ ಸ್ಥಾನೀಯ ಯೋಜನಾಧಿಕಾರಿ ಯೋಗೇಂದ್ರಪ್ಪ ಆಗಮಿಸಿ, ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಧೂಳು ಮತ್ತು ರಸ್ತೆ ಹಾನಿಗೆ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ನೀಡಿದ ಭರವಸೆ ಅನುಸರಿಸಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಯಿತು.

Exit mobile version