Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಸಾಧಕರಿಗೆ ಸನ್ಮಾನ ಕಾರ್ಯಕ್ರಮ

?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಲ್ಲಿ ಅನೇಕ ಮಂದಿ ಸಾಧಕರಿದ್ದು, ಬ್ಯಾಂಕಿಂಗ್, ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ನಮ್ಮ ಸಮಾಜದವರಿಗೆ ಉತ್ತಮ ಸ್ಥಾನಮಾನ ಗೌರವ ಇದೆ. ಈ ಗೌರವವನ್ನು ಕಾಪಾಡಿಕೊಂಡು ಹೋಗಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಮಾಜಕ್ಕೆ ಮಾರ್ಗದರ್ಶನ ನೀಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಹಿರಿಯರನ್ನು ಗೌರವಿಸುವುದು, ಹಿರಿಯರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು ಎಂದು ಕುಂದಪ್ರಭ ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ ಹೇಳಿದರು.

ಅವರು ಗಂಗೊಳ್ಳಿಯ ವೇದಮೂರ್ತಿ ಕೃಷ್ಣಾನಂದ ವಿಶ್ವನಾಥ ಆಚಾರ್ಯ ಸ್ಮಾರಕ ದತ್ತಿನಿಧಿ ವತಿಯಿಂದ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಹಬ್ಬ ಹರಿದಿನಗಳನ್ನು ಆಚರಿಸಬೇಕು. ತಂದೆ, ತಾಯಿ ಗುರು ಹಿರಿಯರನ್ನು ಸದಾ ಸ್ಮರಿಸಿಕೊಳ್ಳುತ್ತಿರಬೇಕು. ದಿ.ಕೃಷ್ಣಾನಂದ ವಿಶ್ವನಾಥ ಆಚಾರ್ಯ ಅವರು ಸಮಾಜಕ್ಕೆ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು. ಅವರ ಮಾರ್ಗದರ್ಶನದಲ್ಲಿ ಸಮಾಜದಲ್ಲಿ ಅನೇಕ ಉತ್ತಮ ಕೆಲಸ ಕಾರ್ಯಗಳು ನಡೆದಿದ್ದು, ಅವರ ನೆನಪಿನಲ್ಲಿ ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು.

ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಕಾರ್ಯದರ್ಶಿ ಜಿ.ವೆಂಕಟೇಶ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಭಟ್ಕಳ ಶ್ರೀ ಕಾಮಾಕ್ಷಿ ದೇವಸ್ಥಾನದ ಅರ್ಚಕ ವೇದಮೂರ್ತಿ ಗಣಪತಿ ಬಾಬಾ ಭಟ್, ಗಂಗೊಳ್ಳಿಯ ಹಿರಿಯ ಕೃಷಿಕ ಎಚ್.ರಂಗನಾಥ ಕಾಮತ್ ಮತ್ತು ಬಸ್ರೂರು ಶಾರದಾ ಕಾಲೇಜಿನ ಉಪನ್ಯಾಸಕಿ ಜಿ.ಸುಮತಿ ಶೆಣೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ, ಜಿ.ಶಂಕರ ಆಚಾರ್ಯ ಉಪಸ್ಥಿತರಿದ್ದರು.
ಜಿ.ಸುದರ್ಶನ ಆಚಾರ್ಯ ಸ್ವಾಗತಿಸಿದರು. ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಮೂರ್ತಿ ಬಸ್ರೂರು ದಾಮೋದರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Exit mobile version