Kundapra.com ಕುಂದಾಪ್ರ ಡಾಟ್ ಕಾಂ

ತಾಲೂಕಿನ ಮಹಿಳೆ,ಮಕ್ಕಳ ಹಕ್ಕುಗಳ ರಕ್ಷಣೆಗೆ ಮಾದರಿ ಯೋಜನೆ: ಶಿಲ್ಪಾ ನಾಗ್

ಕುಂದಾಪ್ರ ಡಾಟ್ ಕಾಂ ಸುದ್ದಿ

ಕುಂದಾಪುರ: ಕುಂದಾಪುರದ ದಿ ಕನ್ಸರ್‌° ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ ಸಂಸ್ಥೆಯ ಆಶ್ರಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಮಹಿಳೆಯರ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಮಾದರಿ ಯೋಜನೆಯನ್ನು ತರಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್‌ ಹೇಳಿದರು.

ಅವರು ಮಹಿಳಾ ದಿನಾಚರಣೆಯ ಅಂಗವಾಗಿ ಕೊರ್ಗಿ ಗ್ರಾ.ಪಂ. ಮತ್ತು ಸಿಡಬ್ಲಿಸಿ ಸಹಯೋಗದಲ್ಲಿ ಹೆಸ್ಕೂತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಹಾಗೂ ಮಹಿಳೆಯರ ಹಕ್ಕು ಮತ್ತು ರಕ್ಷಣೆ ಕುರಿತ ಸಂವಾದದಲ್ಲಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಅಪಾಯಕಾರಿ ಕಲ್ಲುಕೋರೆ ಹೊಂಡಗಳು, ಅಕ್ರಮ ಮದ್ಯ ಮಾರಾಟದಿಂದ ಉಂಟಾಗುವ ಸಮಸ್ಯೆಗಳು, ಬಾಲಕಾರ್ಮಿಕರು ಮೊದಲಾದ ವಿಷಯಗಳ ಕುರಿತು ಸಂವಾದ ನಡೆಸಿದರು. ದುಡಿಯುವ ಮಕ್ಕಳ ವಿರುದ್ಧ ನಡೆಯುವ ದಾಳಿ ಮತ್ತು ರಕ್ಷಣೆಯ ಕಾರ್ಯಕ್ರಮದಿಂದ ಅತ್ಯಂತ ಹಿಂಸೆ ಅನುಭವಿಸಿದ ಮಕ್ಕಳ ಪ್ರತಿನಿಧಿಗಳು ಅವರ ಅನುಭವವನ್ನು ಹಂಚಿಕೊಂಡರು,

ಆಲೂರು ಗ್ರಾ.ಪಂ.ನ ಮಕ್ಕಳ ಸಂಘದ ಪ್ರತಿನಿಧಿಗಳಾದ ಪವನ್‌, ಧನುಶ್‌, ಅಮತಾ ಅವರು ತಮ್ಮ ಗೆಳೆಯನ ಆಕಸ್ಮಿಕ ಸಾವಿನ ಅನಂತರ ತೆರೆದ ಕಲ್ಲು ಕೋರೆಗಳನ್ನು ಮುಚ್ಚಿಸಲು ಅವರು ಮಾಡಿದ ನಿರಂತರ ಪ್ರಯತ್ನದ ಬಗ್ಗೆ ಹಂಚಿಕೊಂಡರು. ಉಡುಪಿ ಜಿ.ಪಂ. ಮಾಜಿ ಸದಸ್ಯ ಮಂಜಯ್ಯ ಶೆಟ್ಟಿ ಅವರು ಇನ್ನೂ 12ಕ್ಕೂ ಹೆಚ್ಚು ಪಂಚಾಯತ್‌ಗಳಲ್ಲಿ ಕಲ್ಲು ಕೋರೆಗೆ ಸಂಬಂಧಿಸಿದಂತೆ ಮಕ್ಕಳು ಮೃತಪಟ್ಟಿರುವುದನ್ನು ತಿಳಿಸುತ್ತಾ, ಈ ಸಂಬಂಧ ಸತತ ಹೋರಾಟ ಜಾರಿಯಲ್ಲಿದೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತರು ತತ್‌ಕ್ಷಣ ಈ ವಿಷಯವನ್ನು ಪರಿಶೀಲಿಸಿ ಮಕ್ಕಳ ರಕ್ಷಣೆಗೆ ಶೀಘ್ರ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದರು.

ಮದ್ಯ ವ್ಯಾಪಾರದ ವಿರುದ್ಧ ಅತ್ಯಂತ ನೋವು ಹಾಗೂ ಸಿಟ್ಟಿನಿಂದ ಮಾತನಾಡಿದ ಮಹಿಳಾ ಪ್ರತಿನಿಧಿಗಳು ಅದರ ವಿರುದ್ಧ ತಮ್ಮ ಸಂಘಟಿತ ಹೋರಾಟಗಳ ಉದಾಹರಣೆಗಳನ್ನು ಹಂಚಿಕೊಳ್ಳುತ್ತಾ ಆ ವಿಷಯಗಳನ್ನು ಪರಿಹರಿಸಿಕೊಳ್ಳಲು ತಮಗಿರುವ ಅಡೆತಡೆಗಳನ್ನು ಚರ್ಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತರು ಈ ಬಗ್ಗೆ ಸ್ಪಂದಿಸಿ ಶೀಘ್ರವಾಗಿ ಜಿಲ್ಲಾಧಿಕಾರಿ ಹಾಗೂ ಅಬಕಾರಿ ಆಯುಕ್ತರ ಜೊತೆಯಲ್ಲಿ ಸಭೆ ನಡೆಸಿ ಇದಕ್ಕೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಆಶ್ವಾಸನೆ ನೀಡಿದರು.
ಶ್ರೀನಿವಾಸ ಗಾಣಿಗ ಸ್ವಾಗತಿಸಿದರು. ಎಸ್‌. ಜನಾರ್ದನ, ಸತೀಶ್‌ ಪೂಜಾರಿ, ದಾಮೋದರ ಆಚಾರ್ಯ ಕೃಪಾ ಎಂ.ಎಂ. ಅವರು ವಿವಿಧ ವಿಷಯ ಪ್ರಸ್ತಾಪಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಮೊಲಿ, ಕಾರ್ಮಿಕ ನಿರೀಕ್ಷಕ ಸತ್ಯನಾರಾಯಣ, ಕುಂದಾಪುರದ ಠಾಣಾಧಿಕಾರಿ ನಾಸಿರ್‌ ಹುಸೇನ್‌, ಕೊರ್ಗಿ ಗ್ರಾ.ಪಂ. ಅಧ್ಯಕ್ಷೆ ಗಂಗಿ ಕುಲಾಲ್ತಿ, ಅಭಿವೃದ್ಧಿ ಅಧಿಕಾರಿ ಹರೀಶ್‌, ಸಿಡಬ್ಲ್ಯುಸಿಯ ನಂದನಾ ರೆಡ್ಡಿ, ಪ್ರಭಾಕರ್‌ ಉಪಸ್ಥಿತರಿದ್ದರು.

Exit mobile version