Kundapra.com ಕುಂದಾಪ್ರ ಡಾಟ್ ಕಾಂ

ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ 30ನೇ ವಾರ್ಷಿಕೋತ್ಸವ

?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಮನೆಗಳಲ್ಲಿ ತಂದೆ ತಾಯಂದಿರು ಸಂಸ್ಕಾರದ ಮೂಲಕ ಸುಸಂಸ್ಕೃತರಾಗಬೇಕು. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಸಂಸ್ಕೃತಿ ಬೆಳೆಯಬೇಕಾದರೆ ಮನೆ ಹಾಗೂ ಶಾಲೆಗಳಲ್ಲಿ ಹಿಂದು ಸಂಸ್ಕೃತಿಯ ಶಿಕ್ಷಣ ನೀಡಬೇಕು. ಸಂಸ್ಕಾರ ಸಂಸ್ಕೃತಿ ನೀಡುವ ಭಾಷೆಯನ್ನು ಬಾಲ್ಯದಲ್ಲಿ ಮಕ್ಕಳಿಗೆ ನೀಡಬೇಕು. ಮಕ್ಕಳನ್ನು ಸತ್ರ್ಪಜೆಗಳನ್ನಾಗಿ ರೂಪಿಸುವ ಮಹತ್ತರವಾದ ಜವಾಬ್ದಾರಿ ಮಕ್ಕಳ ಪೋಷಕರ ಮೇಲಿದೆ. ಮಕ್ಕಳಿಗೆ ಅಗತ್ಯವಾಗಿರುವ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಬೆಳೆಯಲು ಅವಕಾಶ ಕಲ್ಪಿಸಬೇಕು. ಗೋವುಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಉಡುಪಿಯ ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು.

ಅವರು ಗಂಗೊಳ್ಳಿಯ ಶ್ರೀ ವಿಠಲ ರಖುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದ ಶ್ರೀ ಸುಧೀಂದ್ರ ಕೃಪಾ ಸದನದಲ್ಲಿ ಜರಗಿದ ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ 30ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಗಂಗೊಳ್ಳಿಯಲ್ಲಿ ಕಳೆದ ೩೦ ವರ್ಷಗಳಿಂದ ಪುಟ್ಟ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಶಿಕ್ಷಣ ನೀಡುತ್ತಿರುವ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಅಭಿನಂದನೀಯ. ಶಿಶು ಮಂದಿರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿಯರ ಪಾತ್ರ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಶಿಶು ಮಂದಿರದಲ್ಲಿ ಮಕ್ಕಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿ ಶಿಶು ಮಂದಿರ ಸರ್ವತೋಮುಖ ಅಭಿವೃದ್ಧಿ ಹೊಂದಲಿ ಎಂದು ನುಡಿದರು.

ಎಂ.ಐ.ಟಿ. ಮಣಿಪಾಲದ ಡೀನ್ ಜಿ.ಕೆ. ಪ್ರಭು ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿಯ ಹಿರಿಯ ಉದ್ಯಮಿ ಎಚ್.ಗಣೇಶ್ ಕಾಮತ್ ಶುಭಾಶಂಸನೆ ಮಾಡಿದರು. ವೇದಮೂರ್ತಿ ಜಿ.ನಾರಾಯಣ ಆಚಾರ್ಯ, ಹಿರಿಯ ಉದ್ಯಮಿ ದತ್ತಾನಂದ ಗಂಗೊಳ್ಳಿ, ಎಂ.ಡಿ.ಡೆವಲಪರ‍್ಸ್‌ನ ದಯಾನಂದ ರಾಮ ಪೂಜಾರಿ, ಹಿಂದೂ ಜಾಗರಣ ವೇದಿಕೆಯ ಗಂಗೊಳ್ಳಿ ಘಟಕದ ಅಧ್ಯಕ್ಷ ಜಿ.ಗೋವಿಂದ್ರಾಯ ಶೇರುಗಾರ, ಮತೊದ್ಯಮಿ ಕಾಂತು ಬಾಬು ಖಾರ್ವಿ, ಡಾ.ಎಸ್.ಎನ್.ಪಡಿಯಾರ್, ಶಿಶು ಮಂದಿರದ ಅಧ್ಯಕ್ಷ ಶ್ರೀನಿವಾಸ ಎಂ. ಮತ್ತಿತರರು ಉಪಸ್ಥಿತರಿದ್ದರು.
ಸೇವಾ ಸಂಗಮ ಟ್ರಸ್ಟ್‌ನ ವಿಶ್ವಸ್ಥ ಕೇಶವರಾಯ ಪ್ರಭು ಸ್ವಾಗತಿಸಿದರು. ಶಿಶು ಮಂದಿರದ ಸಂಚಾಲಕ ಡಾ.ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ರಾಘವೇಂದ್ರ ಪೈ ಅತಿಥಿಗಳನ್ನು ಪರಿಚಯಿಸಿದರು. ನಾಗರತ್ನ ಯು.ಶೇಟ್ ದಾನಿಗಳ ಪಟ್ಟಿ ಮತ್ತು ಉಷಾ ಪಿ.ಮಡಿವಾಳ ಬಹುಮಾನ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸಾಹಿತಿ ಕೋ.ಶಿವಾನಂದ ಕಾರಂತ ಕಾರ್ಯಕ್ರಮ ನಿರೂಪಿಸಿದರು. ಶಿಶು ಮಂದಿರದ ಕಾರ್ಯದರ್ಶಿ ಸವಿತಾ ಯು.ದೇವಾಡಿಗ ವಂದಿಸಿದರು.

Exit mobile version