Kundapra.com ಕುಂದಾಪ್ರ ಡಾಟ್ ಕಾಂ

ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿ: ಸುಭಾಶ್ಚಂದ್ರ ವಾಗ್ಲೆ ಮತ್ತು ನವೀನ್.ಕೆ ಇನ್ನ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ತನ್ನ ಇಪ್ಪತ್ತೈದರ ಹರೆಯದಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯ ಪ್ರಶಸ್ತಿ ಪಡೆದ ದಿ. ರಾಜೇಶ ಶಿಬಾಜೆ ಹೆಸರಿನಲ್ಲಿ ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಘಟಕವು ನೀಡುವ ಪ್ರತಿಷ್ಠಿತ ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿಗೆ ಉಡುಪಿಯ ಹಿರಿಯ ಪತ್ರಕರ್ತ ಕನ್ನಡಪ್ರಭ ವರದಿಗಾರ ಸುಭಾಶ್ಚಂದ್ರ ಎಸ್.ವಾಗ್ಲೆ ಮತ್ತು ಮುಂಬಯಿಯ ಕರ್ನಾಟಕ ಮಲ್ಲದಲ್ಲಿ ೨೫ ವರ್ಷಗಳಿಂದ ಕ್ರೀಡಾ ಅಂಕಣವನ್ನು ಬರೆಯುತ್ತಿರುವ ಕರ್ನಾಟಕ ಮಲ್ಲ ಪತ್ರಿಕೆಯ ವರದಿಗಾರ ನವೀನ್ ಕೆ. ಇನ್ನ ಅವರು ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.

ಸುಭಾಶ್ಚಂದ್ರ ಎಸ್. ವಾಗ್ಳೆ
ಅವರು ಕನ್ನಡ ಪ್ರಭ ಪತ್ರಿಕೆಯ ಹಿರಿಯ ವರದಿಗಾರರಾಗಿದ್ದಾರೆ. ೧೯೯೬ರಲ್ಲಿ ಪುತ್ತೂರಿನ ಜನ ಈ ದಿನ ಪತ್ರಿಕೆಯಲ್ಲಿ ಛಾಯಾಚಿತ್ರಗ್ರಾಹಕರಾಗಿ ವೃತ್ತಿ ಆರಂಭ. ೧೯೯೮ರಲ್ಲಿ ಸುಪ್ರಭಾತ ಛಾನೆಲ್, ೧೯೯೯ರಲ್ಲಿ ಕಾವೇರಿ ಛಾನೆಲ್, ೨೦೦೦ರಲ್ಲಿ ಉಡುಪಿ ದರ್ಶನ ಕೇಬಲ್ ಛಾನೆಲ್, ೨೦೦೨ರಲ್ಲಿ ಕನ್ನಡಪ್ರಭದ ಮಣಿಪಾಲ ವರದಿಗಾರ, ೨೦೦೩ರಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಸೇವೆ ಆರಂಭಿಸಿ ಅದೇ ಪತ್ರಿಕೆಯಲ್ಲಿ ೧೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಛಾಯಾಗ್ರಹಣ ಅವರ ಪ್ರೀತಿಯ ಕ್ಷೇತ್ರ, ಸಾಹಿತ್ಯಾಸಕ್ತರು.

ನವೀನ್ ಕೆ.ಇನ್ನ:
ಭಾರತೀಯ ಭಾಷಾ ಪತ್ರಿಕೋದ್ಯಮದಲ್ಲಿಯೇ ದಾಖಲೆಯೆಂಬಂತೆ ಕಳೆದ ೨೫ ವರ್ಷಗಳಿಂದ ಒಂದೇ ಪತ್ರಿಕೆಯಲ್ಲಿ ಪ್ರತಿವಾರ ಕ್ರೀಡಾ ಅಂಕಣ ಬರೆಯುತ್ತಾ ಬಂದವರು. ಯಾಉದೇ ಫಲಾಪೇಕ್ಷೆ ಪಡೆಯದೆ, ಗೌರವ ಧನ ಪಡೆಯದೆ ಈ ಅಂಕಣವನ್ನು ಬರೆಯುತ್ತಿದ್ದಾರೆ.ಕಾರ್ಕಳ ತಾಲೂಕಿನ ಇನ್ನದವರಾದ ಅವರು ಹುಟ್ಟಿ ಬೆಳೆದದ್ದು ಮುಂಬಯಿಯಲ್ಲಿ, ಆದರೂ ಅವರಿಗೆ ತನ್ ನ ಹುಟ್ಟೂರಿನ ಬಗ್ಗೆ ವಿಶೇಷ ಕಾಳಜಿ. ಮುಂಬಯಿಯ ದೈನಿಕ ಕರ್ನಾಟಕ ಮಲ್ಲದ ವರದಿಗಾರರಾಗಿ, ಜಾಹಿರಾತುದಾರರಾಗಿ, ಸ್ವತಃ ಛಾಯಾಗ್ರಾಹಕರಾಗಿ ಮತ್ತು ಸಮಾಜ ಸೇವಕರಾಗಿ ಮುಂಬಯಿಯಲ್ಲಿ ಜನಪ್ರಿಯರಾಗಿದ್ದಾರೆ. ದೈವ, ದೇವರ ಬಗ್ಗೆ ಅಪಾರ ಅಭಿಮಾಣ ಹೊಂದಿರುವ ಅವರು ಧಾರ್ಮಿಕ ಕ್ಷೇತ್ರಗಳ ಬಗ್ಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ಮುಂಬಯಿಯ ದೈವಾರಾಧನೆಯ ಬಗ್ಗೆ ನಡೆದಾಡುವ ವಿಶ್ವಕೋಶವಾಗಿದ್ದಾರೆ.

ದಯಾನಂದ ಪೈ ಕುಂಟಾಡಿ ಅವರಿಂದ ಆರಂಭಿಸಿ ಸತತವಾಗಿ ಈ ಗೌರವವನ್ನು ಮೊದಲು ಯುವ ಪ್ರತಿಭಾ ವೇದಿಕೆ ಮೂಲಕ ಮತ್ತು ಈಗ ಪತ್ರಕರ್ತರ ವೇದಿಕೆ ಮೂಲಕ ಈ ಗೌರವ ನೀಡಲಾಗುತ್ತಿದೆ. ಪಾಲಾಕ್ಷ ಸುವರ್ಣ ಬೆಳ್ತಂಗಡಿ, ಜಾನ್ ಡಿಸೋಜಾ ಕುಂದಾಪುರ, ಸುಕುಮಾರ ಮುನಿಯಾಲ್, ಯು.ಎಸ್.ಶೆಣೈ, ವಿಲಾಸ್ ಕುಮಾರ್ ನಿಟ್ಟೆ, ಧನಂಜಯ ಗುರುಪುರ, ಚಂದ್ರ ಕೆ. ಹೆಮ್ಮಾಡಿ ಮೊದಲಾದವರಿಗೆ ಈ ಹಿಂದೆ ರಾಜೇಶ ಶಿಬಾಜೆ ಮಾಧ್ಯಮ ಗೌರವ ನೀಡಲಾಗಿದೆ.

 

Exit mobile version