Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯರನ್ನು ತರಾಟೆಗೆ: ಪ್ರತಿಭಟನೆಯ ಎಚ್ಚರಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರು ಹಾಗೂ ಸಿಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಅಲ್ಲದೇ ರೋಗಿಗಳಿಗೆ ಸರಿಯಾದ ಚಿಕಿತ್ಸೆಯನ್ನು ನೀಡುವ ಬಗ್ಗೆ ನಿಗಾ ವಹಿಸುತ್ತಿಲ್ಲ ಎನ್ನುವ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಮಿಕ ವೇದಿಕೆಯ ಸದಸ್ಯರು ಮಂಗಳವಾರ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಆಸ್ಪತ್ರೆಗೆ ಧಾವಿಸಿದ ವೇದಿಕೆಯ ಅಧ್ಯಕ್ಷ ರವಿ ಶೆಟ್ಟಿ ನೇತೃತ್ವದ ವೇದಿಕೆಯ ಸದಸ್ಯರು ಭೇಟಿ ನೀಡಿ ಅಲ್ಲಿ ರೋಗಿಗಳಿಗೆ ನೀಡುತ್ತಿರುವ ಔಷಧೋಪಚಾರಗಳ ಬಗ್ಗೆ ಮಾಹಿತಿ ಪಡೆದು ಕೆಲವು ರೋಗಿಗಳಿಂದ ಬಂದ ದೂರಿನ ವಿಚಾರವನ್ನು ತೆಗೆದುಕೊಂಡು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಯ ಎಲ್ಲ ವಿಭಾಗವನ್ನು ಭೇಟಿ ಮಾಡಿದ ಸದಸ್ಯರು ಅಲ್ಲಿನ ಮೂಲ ಸೌಕರ್ಯದ ಬಗ್ಗೆ ಮಾಹಿತಿಯನ್ನು ಪಡೆದರಲ್ಲದೇ ಕುಡಿಯುವ ನೀರಿನ ಯಂತ್ರವನ್ನು ಪರಿಶೀಲಿಸಿ ಅದು ಅಶುದ್ಧವಾಗಿರುವ ಬಗ್ಗೆ ಆಕ್ರೊಶ ವ್ಯಕ್ತಪಡಿಸಿದರಲ್ಲದೇ ಅದನ್ನು ವೈದ್ಯಾಧಿಕಾರಿಗಳಿಗೆ ತೋರಿಸಿದರು. ಅಲ್ಲದೇ ಆಸ್ಪತ್ರೆಯ ಆವರಣದಲ್ಲಿ ಕೊಳಚೆ ನೀರು ಹರಿಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಆಸ್ಪತ್ರೆಗೆ ಆಗಮಿಸಿದ ಮುಖ್ಯ ವೈದ್ಯಾಧಿಕಾರಿ ಡಾ| ಉದಯ ಶಂಕರ್‌ ಅವರಲ್ಲಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸ್ಪಂದಿಸದ ಮತ್ತು ಸಮಸ್ಯೆಗಳ ಬಗ್ಗೆ ಸ್ಪಷ್ಟನೆ ಕೇಳಿದ ವೇದಿಕೆಯ ಅಧ್ಯಕ್ಷ ರವಿ ಶೆಟ್ಟಿ ಅವರು ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಕಡು ಬಡವರಾಗಿದ್ದು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಅವರಿಗೆ ಉತ್ತಮ ಚಿಕಿತ್ಸೆಯ ಸ್ಪಂದನ ನೀಡುವ ಬದಲು ಅವರನ್ನು ಖಾಸಗಿ ಆಸ್ಪತ್ರೆಯತ್ತ ಮುಖ ಮಾಡಿಸುವುದು ಎಷ್ಟು ಸಮಂಜಸ ಎಂದರು.

ಅಲ್ಲದೇ ಈ ಆಸ್ಪತ್ರೆಯಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ದೊರಕಬೇಕು. ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಯವರಲ್ಲಿ ಈಗಾಗಲೇ ಮನವಿ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರೊಂದಿಗೆ ಮಾತಿನ ಚಕಮಕಿ: ತತ್‌ಕ್ಷಣ ಆಸ್ಪತ್ರೆಗೆ ಆಗಮಿಸಿದ ವೃತ್ತ ನಿರೀಕ್ಷಕ ಮಂಜಪ್ಪ ಹಾಗೂ ಠಾಣಾಧಿಕಾರಿ ನಾಸಿರ್‌ ಹುಸೇನ್‌ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ ವೇದಿಕೆಯ ಸದಸ್ಯರು ಇಲ್ಲಿನ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ತಿಳಿಸಿದರು.

ಇದೇ ಸಮಯದಲ್ಲಿ ಸ್ಪಂದನೆ ನೀಡಿ ಮಾಹಿತಿ ನೀಡಬೇಕಾದ ವೈದ್ಯರೊಬ್ಬರು ನಿರ್ಲಕ್ಷ ತೋರಿ ಅಸಭ್ಯವಾಗಿ ವರ್ತಿಸಿದ್ದಾರೆ ಅವರು ತತ್‌ಕ್ಷಣ ಕ್ಷಮೆ ಕೇಳಬೇಕು ಎಂದು ಧರಣಿ ಕೂರಿದ ವೇದಿಕೆಯ ಸದಸ್ಯರು ವೈದ್ಯರ ವಿರುದ್ಧ ಘೋಷಣೆಯನ್ನು ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಪೊಲೀಸ್‌ ಅಧಿಕಾರಿಗಳು ಪ್ರತಿಭಟನಕಾರರಿಗೆ ಎಚ್ಚರಿಕೆಯನ್ನು ನೀಡಿದರಲ್ಲದೇ ಎಲ್ಲರನ್ನು ಚದುರಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ಕೊನೆಯಲ್ಲಿ ಮಾತನಾಡಿದ ಕರ್ನಾಟಕ ಕಾರ್ಮಿಕ ವೇದಿಕೆ ಅಧ್ಯಕ್ಷ ರವಿ ಶೆಟ್ಟಿ ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆಗಳು ಸರಿ ಯಾಗಬೇಕು. ಆಸ್ಪತ್ರೆಯಲ್ಲಿ ಲಭ್ಯರಿರುವ ವೈದ್ಯರು, ಇಲ್ಲಿರುವ ಸೌಲಭ್ಯಗಳು, ಸ್ಲಾÂನಿಂಗ್‌ ಹಾಗೂ ಇತರ ವ್ಯವಸ್ಥೆಗಳ ಬಗ್ಗೆ ರೋಗಿಗಳಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಇಲ್ಲಿನ ಕುಡಿಯುವ ನೀರು, ಸ್ವತ್ಛತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಈ ಎಲ್ಲ ವ್ಯವಸ್ಥೆಗಳು ಒಂದು ವಾರದಲ್ಲಿ ಆಗದೇ ಹೋದಲ್ಲಿ ಕರ್ನಾಟಕ ಕಾರ್ಮಿಕ ವೇದಿಕೆಯೊಂದಿಗೆ ಜಿಲ್ಲೆಯ ಇತರ ಸಂಘಟನೆಯೊಂದಿಗೆ ಕೂಡಿಕೊಂಡು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

Exit mobile version