ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆಯಲ್ಲಿ ನಿರ್ಮಾಣವಾಗುತ್ತಿರುವ ಮೀನುಗಾರಿಕಾ ಹೊರಬಂದರು ಪ್ರದೇಶದಲ್ಲಿ ಆಗುತ್ತಿರುವ ಕಡಲ್ಕೊರೆತ ಅಪಾಯಕಾರಿ ಹಂತ ತಲಪಿದೆ. ಒಂದೆಡೆ ಬಂದರು ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದರೆ, ಇನ್ನೊಂದೆಡೆ ಕಡಲ್ಕೊರೆತ ತಡೆಗೆ ಕ್ಷಿಪ್ರ ಕ್ರಮ ಕೈಗೊಳ್ಳುತ್ತಿಲ್ಲ. ಇದೇ ಸ್ಥಿತಿ ಮಳೆಗಾಲದ ವರೆಗೆ ಮುಂದುವರಿದರೆ ಇಲ್ಲಿ ತೀವ್ರ ಸ್ವರೂಪದ ಜೀವ ಮತ್ತು ಆಸ್ತಿಪಾಸ್ತಿ ಹಾನಿ ಸಂಭವಿಸಲಿದೆ ಎಂದು ಮೀನುಗಾರರು ದೂರಿದರು.
ಸ್ಥಳ ಪರಿಶೀಲನೆಗೆ ಬರಬೇಕಾಗಿದ್ದ ಜಿಲ್ಲಾಧಿಕಾರಿಗಳ ಬದಲಾಗಿ ಬಂದಿದ್ದ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಅವರೆದುರು ಅಳಲು ತೋಡಿಕೊಂಡ ಮೀನುಗಾರರು ಇದಕ್ಕೆ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಇಂಜಿನಿಯರ್ ಹಾಗೂ ಬಂದರು ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರ ಕಾರಣ ಎಂದು ಅವರ ವಿರುದ್ಧ ಹರಿಹಾಯ್ದರು. ಇಲ್ಲಿ ಬೇಸಿಗೆಯಲ್ಲೂ ಕಡಲ್ಕೊರೆತ ನಡೆಯುತ್ತಿರುವುದಕ್ಕೆ ಬಂದರು ಕಾಮಗಾರಿಯ ನಿಧಾನಗತಿಯ ನಿರ್ವಹಣೆ ಕಾರಣ. ಅದು ಈ ವರ್ಷವೂ ಪೂರ್ಣಗೊಳ್ಳುವ ಲಕ್ಷಣ ಇಲ್ಲವಾಗಿರುವುದರಿಂದ ಕೊರೆತ ತಡೆಗೆ ತಾತ್ಕಾಲಿಕ ತಡೆಯನ್ನಾದರೂ ಹಾಕಬೇಕು ಎಂದು ಅವರು ಆಗ್ರಹಿಸಿದರು. ವಾರದ ಹಿಂದೆ ಶಾಸಕರು ಭೇಟಿನೀಡಿ ತಾತ್ಕಾಲಿಕ ಕ್ರಮಕ್ಕೆ ಚಾಲನೆ ನೀಡಿರುವುದನ್ನು ಉಲ್ಲೇಖಿಸಿದ ಅವರು ಅದು ಇನ್ನಷ್ಟು ವೇಗಪಡೆಯಬೇಕು ಎಂದರು.
ಉಪ ವಿಭಾಗಾಧಿಕಾರಿ ಇಲ್ಲಿ ೪೩೦ ಮೀಟರ್ ಉದ್ದದ ತೀರದಲ್ಲಿ ಕೊರೆತ ಸಂಭವಿಸಿ, ಜಮೀನು, ಮರಮಟ್ಟು, ಮೀನುಗಾರರ ಶೆಡ್ ಹಾನಿಗೀಡಾಗಿರುವುದನ್ನು ವೀಕ್ಷಿಸಿದರು. ಕಾರ್ಯನಿರ್ವಾಹಕ ಇಂಜಿನಿಯರ್ ದಯಾನಂದ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್, ಗುತ್ತಿಗೆದಾರ ಶರವಣನ್ ಅವರೊಡನೆ ಚರ್ಚಿಸಿದರು. ಇಂದೇ ಇವರೆಲ್ಲರೊಡನೆ ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಡುವ ಭರವಸೆ ಇತ್ತರು. ಬಂದರುಕಾಮಗಾರಿ ಹೇಗೇ ನಡೆಯಲಿ, ಇಲ್ಲಿ ಕೊರೆತ ತಡೆಗೆ ಸಮರೋಪಾದಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬೈಂದೂರು ವಿಶೇಷ ತಹಶಿಲ್ದಾರ್ ಕಿರಣ್ ಗೌರಯ್ಯ, ಇಂಜಿನಿಯರ್ ಲವೀಶ್, ಡಯಾಸ್, ಗ್ರಾಮ ಕರಣಿಕ ಮಹಾಂತೇಶ್, ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ವೆಂಕಟರಮಣ ಖಾರ್ವಿ, ಮಾಜಿ ಅಧ್ಯಕ್ಷರಾದ ಸೋಮಯ್ಯ ಖಾರ್ವಿ, ಚಂದ್ರ ಖಾರ್ವಿ, ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ ಖಾರ್ವಿ, ಪ್ರಭಾಕರ ಖಾರ್ವಿ, ಮಾಜಿ ಅಧ್ಯಕ್ಷರಾದ ಎಂ. ವಿನಾಯಕ ರಾವ್, ಎಸ್. ಜನಾರ್ದನ, ಮಾಜಿ ಸದಸ್ಯರಾದ ಮೋಹನ ಖಾರ್ವಿ, ರಾಮಕೃಷ್ಣ ಖಾರ್ವಿ, ಅಣ್ಣಪ್ಪ ಖಾರ್ವಿ, ಇತರರು ಇದ್ದರು.