ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ನಮ್ಮ ದೇಶದಲ್ಲಿ ನಾವು ಸುರಕ್ಷಿತವಾಗಿವಾಗಿರಬೇಕಿದ್ದರೆ ನಮ್ಮ ದೇಶದ ಗಡಿಯನ್ನು ಕಾಯುತ್ತಿರುವ ಯೋಧರು ಮುಖ್ಯ ಕಾರಣ. ಕೊರೆವ ಚಳಿ, ಮೈಸುಡುವ ಬಿಸಿಲನ್ನು ಲೆಕ್ಕಿಸದೆ ದೇಶದ ಗಡಿಯಲ್ಲಿ ನಿಂತು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿರುವ ಯೋಧರನ್ನು ನಾವು ಪ್ರತಿನಿತ್ಯ ಸ್ಮರಿಸಿಕೊಳ್ಳಬೇಕು. ದೇಶದ ಆಂತರಿಕ ಹಾಗೂ ಹೊರಗಿನ ದೇಶವಿರೋಧಿ ಶಕ್ತಿಯನ್ನು ದಮನಿಸುತ್ತಾ ದೇಶವನ್ನು ಕಾಯುವ ನಮ್ಮ ದೇಶದ ಯೋಧರ ಕಾರ್ಯ ಪ್ರಶಂಸನೀಯ. ಇತ್ತೀಚಿಗೆ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ದೇಶ ಸೇವೆಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ ಎಂದು ಉಡುಪಿ ಜಿಲ್ಲಾ ಹಿಂದು ಜಾಗರಣ ವೇದಿಕೆ ಸಂಚಾಲಕ ಅರವಿಂದ ಕೋಟೇಶ್ವರ ಹೇಳಿದರು.
ಅವರು ಗಂಗೊಳ್ಳಿಯ ಸ್ಫೂರ್ತಿ ಮಹಿಳಾ ಘಟಕದ ಆಶ್ರಯದಲ್ಲಿ ಗಂಗೊಳ್ಳಿ ದೊಡ್ಡಹಿತ್ಲು ವಠಾರದಲ್ಲಿ ಜರಗಿದ ಸಂದೀಪ್ ಉನ್ನಿಕೃಷ್ಣನ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಉಳಿಸಲು ಮಾತೆಯರು ಮುಂದಾಗಬೇಕು. ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿ ನಮ್ಮ ಹಿಂದು ಸಂಸ್ಕೃತಿ, ಆಚಾರ ವಿಚಾರಗಳನ್ನು ಮನದಟ್ಟು ಮಾಡಬೇಕು. ಬಲಿಷ್ಠ ಹಿಂದು ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸಬೇಕು. ದೇಶದ ಭದ್ರತೆ ಹಾಗೂ ಭಯೋತ್ಪಾದನೆ ವಿಚಾರದಲ್ಲಿ ಎಲ್ಲರೂ ಜಾತಿ ಮತಬೇಧ ಮರೆದು ದೇಶವನ್ನು ಕಾಪಾಡಲು ಒಂದಾಗಬೇಕು ಎಂದರು.
ಉಡುಪಿ ಜಿಲ್ಲಾ ಹಿಂದು ಜಾಗರಣ ವೇದಿಕೆ ಸಹಸಂಚಾಲಕ ವಾಸು ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿಯ ಉದ್ಯಮಿ ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮೋಹನ ಖಾರ್ವಿ ಶುಭ ಹಾರೈಸಿದರು. ಸ್ಪೂರ್ತಿ ಮಹಿಳಾ ಘಟಕದ ಅಧ್ಯಕ್ಷೆ ಅರ್ಚನಾ ಉಪಸ್ಥಿತರಿದ್ದರು.
ದೀಕ್ಷಿತಾ ಸ್ವಾಗತಿಸಿದರು. ನಿರೂಷಾ ವಂದಿಸಿದರು.