ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸರಕಾರಿ ನಿವೇಶನ ಸ್ಥಳ ಜನತಾ ಕಾಲೋನಿಯಲ್ಲಿ ಭೂಮಿ ಪಡೆದುಕೊಂಡು ಇನ್ನು ಮನೆ ಕಟ್ಟದೆ ಸ್ಥಳ ಖಾಲಿ ಬಿಟ್ಟು ಅಥವಾ ಇತರರಿಗೆ ವಹಿಸಿಕೊಟ್ಟ ಪ್ರಕರಣ ಇದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ವಾಸ ಇರುವವರಿಗೆ ಭೂಮಿಯನ್ನು ಹಸ್ತಾಂತರಿಸಲು ಕ್ರಮವಹಿಸಬೇಕು. ಭೂಮಿ ನೀಡಿದ ಎರಡು ವರ್ಷದೊಳಗೆ ಮನೆ ಕಟ್ಟಿಕೊಳ್ಳಬೇಕು ಎಂಬ ಷರತ್ತು ಇದೆ. ಅದನ್ನು ಮೀರಿ ಇತರರಿಗೆ ವಹಿಸಿಕೊಟ್ಟಿಲ್ಲ. ಅವರಿಗೆ ಹಸ್ತಾಂತರಿಸಬೇಕು ಎಂದು ಶಿರೂರಿನ ನಿವೇಶನ ರಹಿತರ ಹೋರಾಟ ಸಮಿತಿಯ ಮುಖಂಡ ಶೋಯೆಬ್ ಅರೆಹೊಳೆ ಹೇಳಿದರು. ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತ ಹಾಗೂ 94ಸಿ ಅರ್ಜಿದಾರರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡುತ್ತಾ ಶಿರೂರು ಗ್ರಾಮದ ಮೊದೀನತಾರ ಮತ್ತು ನ್ಯೂಕಾಲಿನಿಯಲ್ಲಿ ಸರಕಾರಿ ಜಾಗದ ನಿವಾಸಿಗಳಿಗೆ ಹಕ್ಕು ಪತ್ರ ಮಂಜೂರು ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಏಪ್ರಿಲ್ 18 ರಂದು ಬೈಂದೂರು ಶಾಸಕರ ಮನೆ ಚಲೋ ಹೋರಾಟ ಯಶಸ್ವಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮನೆ ನಿವೇಶನ ರಹಿತರಿಗೆ ನಿವೇಶನ ಸ್ಥಳ 94ಸಿ ಕಲಂಗೆ ಸೂಕ್ತ ಕಾನೂನು ತಿದ್ದುಪಡಿಗೆ ಕ್ರಮವಹಿಸಲು ಸಮಾವೇಶದಲ್ಲಿ ನಿರ್ಣಯಿಸಲಾಯಿತು. ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಶೀಲಾವತಿ, ಯು. ದಾಸಭಂಡಾರಿ, ರಾಜೀವ ಪಡುಕೋಣೆ, ನಾಗರತ್ನ ನಾಡ, ಅಜಮುತ್ತಲ್ಲ ಶಿರೂರು ಉಪಸ್ಥಿತರಿದ್ದರು.