Site icon Kundapra.com ಕುಂದಾಪ್ರ ಡಾಟ್ ಕಾಂ

ಗೋಳಿಹೊಳೆ: ನಗದು ರಹಿತ ವ್ಯವಹಾರದ ಕುರಿತಾಗಿ ಒಂದು ದಿನದ ಕಾರ್ಯಾಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೇಂದ್ರ ಸರಕಾರ ಕೈಗೊಂಡ ಆರ್ಥಿಕ ಸುಧಾರಣೆಯ ಮುಂದಿನ ಭಾಗವಾಗಿ ಬ್ಯಾಂಕ್ ಹಾಗೂ ಇತರ ಹಣಕಾಸು ಕ್ಷೇತ್ರದಲ್ಲಿ ನಗದು ರಹಿತವಾದ ವ್ಯವಹಾರಗಳನ್ನು ದೈನಿಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಉಡುಪಿ ಜಿಲ್ಲಾ ಅಗ್ರಿಣಿ ಬ್ಯಾಂಕಿನ ಮುಖ್ಯಪ್ರಬಂಧಕ ಫ್ರಾನ್ಸಿಸ್ ಬೋರ‍್ಗೆ ಹೇಳಿದರು.

ಗೋಳಿಹೊಳೆ ಗ್ರಾಮ ಪಂಚಾಯತ್, ಸ್ಥಳೀಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ನಬಾರ್ಡ್ ಮತ್ತು ಜ್ಞಾನಜ್ಯೋತಿ ಆರ್ಥಿಕ ಸಲಹಾ ಕೇಂದ್ರ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ, ನಗದು ರಹಿತ ವ್ಯವಹಾರದ ಕುರಿತಾಗಿ ನಡೆದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕ ಎಸ್. ಜಿ. ಗಚ್ಚಿನ ಮಠ್ ಇವರು ಬ್ಯಾಂಕಿನ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆಯ ಫಲಾನುಭವಿಗಳಿಗೆ ತಲಾ ರೂ. ೨ ಲಕ್ಷದ ಪರಿಹಾರ ಧನ ವಿತರಿಸಿದರು. ಶರತ್ ಕುಮಾರ್ ಮತ್ತು ಜಿ. ಜಿ. ಹೆಗ್ಡೆ ನಗದು ರಹಿತ ವ್ಯವಹಾರ ಹಾಗೂ ಆರ್ಥಿಕ ಸಾಕ್ಷರತೆ, ಸಬಲೀಕರಣಗಳ ಬಗ್ಗೆ ತರಗತಿ ನಡೆಸಿದರು. ರುಡ್‌ಸೆಟ್‌ನ ರಾಘವೇಂದ್ರ, ಸಿಂಡ್‌ಆರ್ ಸೆಟ್‌ನ ಸಂತೋಷ್ ತಮ್ಮ ತರಬೇತಿ ಸಂಸ್ಥೆಯ ಕುರಿತಾದ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಗೋಳಿಹೊಳೆ ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ ಸರಕಾರದ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ಸ್ಥೂಲ ಚಿತ್ರಣ ನೀಡಿದರು. ಪಿಡಿಒ ಚಂದ್ರಶೇಖರ್, ಬ್ಯಾಂಕಿನ ಹಿರಿಯ ಅಧಿಕಾರಿ ಟಿ. ಆರ್. ಶೆಟ್ಟಿ ಉಪಸ್ಥಿತರಿದ್ದರು. ವಾದಿರಾಜ ಧನ್ಯ ಪ್ರಾಸ್ತಾವಿಸಿದರು. ಕವಿಗ್ರಾ ಬ್ಯಾಂಕಿನ ಗೋಳಿಹೊಳೆ ಶಾಖಾ ಪ್ರಬಂಧಕ ಸುಬ್ರಹ್ಮಣ್ಯ ರಾವ್ ಸ್ವಾಗತಿಸಿ, ಜ್ಞಾನಜ್ಯೋತಿ ಸಂಸ್ಥೆಯ ಆಶಾಲತಾ ನಿರೂಪಿಸಿದರು. ವಾಸುದೇವ ಗೌಡ ವಂದಿಸಿದರು.

Exit mobile version