Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ಅಷ್ಟಪವಿತ್ರ ನಾಗಮಂಡಲೋತ್ಸವ: ಉಪಕಾರ ಸ್ಮರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೊಲ್ಲೂರಿನ ಜನತೆಯ ಸಂಘಟಿತ ಒಗ್ಗೂಡುವಿಕೆಯಿಂದ ಕೊಲ್ಲೂರು ಅಷ್ಟಪವಿತ್ರ ನಾಗಮಂಡಲೋತ್ಸವ ಅತ್ಯಂತ ಯಶಸ್ವಿಯಾಗಿ ಜರಗಿದೆ. ರಮೇಶ ಗಾಣಿಗರ ಸಾರ್ವಜನಿಕ ಸೇವೆಯ ಪ್ರತಿರೂಪವಾಗಿ ಈ ನಾಗಮಂಡಲೋತ್ಸವ ಅದ್ದೂರಿಯಾಗಿ, ನಿರ್ವಿಘ್ನವಾಗಿ ಯಶಸ್ಸುಗೊಂಡಿದೆ. ಇದರ ಯಶಸ್ಸಿನಿಂದ ಕೊಲ್ಲೂರು ಅಭಿವೃದ್ಧಿಗೆ, ಕೊಲ್ಲೂರಿನಲ್ಲಿ ಜನತೆಯ ಒಗ್ಗಟ್ಟಿಗೆ ಇದು ದಿಕ್ಸೂಚಿಯಾಗಲಿ ಎಂದು ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.

ಕೊಲ್ಲೂರು ಶ್ರೀಮತಿ ನಯನಾ ರಮೇಶ ಗಾಣಿಗ ಮತ್ತು ಮಕ್ಕಳು ನಂಬಿರುವ ಮೂಲ ನಾಗಬನದಲ್ಲಿ ಮಾ.೧೦ರಂದು ನಡೆದ ಅಷ್ಟಪವಿತ್ರ ನಾಗಮಂಡಲದ ಯಶಸ್ಸಿಗೆ ದುಡಿದ ಸ್ವಯಂಸೇವಕರ ’ಉಪಕಾರ ಸ್ಮರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಷ್ಟಪವಿತ್ರ ನಾಗಮಂಡಲದ ಯಶಸ್ಸಿಗೆ ದುಡಿದ ಸಾವಿರಾರು ಸ್ವಯಂಸೇವಕರ ಸೇವೆಯನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಲಾಯಿತು. ಎಲ್ಲ ಸ್ವಯಂಸೇವಕರ ಪರವಾಗಿ ಕೃತಜ್ಞತಾ ಪತ್ರವನ್ನು ಕೊಲ್ಲೂರು ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸಲಾಯಿತು.
ಸಭೆಯಲ್ಲಿ ಶುಭಶಂಸನೆಗೈದ ವೇ.ಮೂ.ಕೃಷ್ಣ ಭಟ್ ನೂಜಾಡಿ, ಇಂಥಹ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಲು ಯೋಗ ಬೇಕು. ನಾನು ಈ ಬಾರಿ ಮೂರು ನಾಗಮಂಡಲ ಪೌರೋಹಿತ್ಯ ಮಾಡಿದ್ದು ಒಂದಕ್ಕಿಂತ ಒಂದು ಉತ್ತಮವಾಗಿ ಮೂಡಿಬಂದಿದೆ. ಸಂಕಲ್ಪ ಒಳ್ಳೆದಾಗಿದ್ದರೆ ಮಾಡುವ ಕಾರ್ಯ ಒಳ್ಳೆದಾಗುತ್ತದೆ. ಈ ಮಹತ್ಕಾರ್ಯದಲ್ಲಿ ದುಡಿದವರ ಸೇವೆಯನ್ನು ಸ್ಮರಿಸುವ ಕಾರ್ಯ ಸೇವಾರ್ಥಿಗಳ ಒಳ್ಳೆಯತನವನ್ನು ತೋರಿಸುತ್ತದೆ ಎಂದರು.

ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ತಾ.ಪಂ.ಮಾಜಿ ಸದಸ್ಯ ನಾಗಪ್ಪ ಕೊಠಾರಿ, ನಿವೃತ್ತ ಮುಖ್ಯೋಪಾಧ್ಯಾಯ ರಾಜೀವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ನಾಗಮಂಡಲದ ಸೇವಾರ್ಥಿಗಳಾದ ಶ್ರೀಮತಿ ನಯನಾ ರಮೇಶ ಗಾಣಿಗ ಕೊಲ್ಲೂರು, ಪವನ್ ಗಾಣಿಗ, ಪ್ರಸನ್ನ ಗಾಣಿಗ, ಪ್ರಥ್ವಿನ್ ಗಾಣಿಗ ಎಲ್ಲರಿಗೂ ಕೃತಜ್ಞತೆ ಸಲ್ಲಸಿದರು. ರಂಗ ನಾಯ್ಕ್ ವಂದಿಸಿದರು. ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತಾ ಪತ್ರ ನೀಡಿ ಗೌರವಿಸಲಾಯಿತು.

 

Exit mobile version