ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಬಿಜೆಪಿ ಪಕ್ಷವನ್ನು ಸೇರಿದ ಬಳಿಕ ಮೊದಲ ಭಾರಿಗೆ ಕುಂದಾಪುರ ಬಿಜೆಪಿ ಕಛೇರಿಗೆ ಭೇಟಿ ನೀಡಿದರು. ಕುಂದಾಪುರ ಬಿಜೆಪಿ ಪದಾಧಿಕಾರಿಗಳು ಜೆಪಿ ಹೆಗ್ಡೆ ಅವರನ್ನು ಬರಮಾಡಿಕೊಂಡು ಘೋಷಣೆಯೊಂದಿಗೆ ಪಕ್ಷದ ಕಛೇರಿಗೆ ಸ್ವಾಗತಿಸಿಕೊಂಡರು.
ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜೆ.ಪಿ ಹೆಗ್ಡೆ, ಕಾರ‍್ಯಕರ್ತರ ಬಲ ಜೊತೆಗಿದ್ದರೇ ನಾಯಕರಿಗೆ ಆನೆ ಬಲ ಬಂದಂತಾಗುತ್ತದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಎಲ್ಲರೂ ಒಟ್ಟು ಸೇರಿದರೆ ಪಕ್ಷಕ್ಕೆ ಶಕ್ತಿ ಬರುತ್ತದೆ. ಒಗ್ಗಟ್ಟಾಗಿ ಅಭಿವೃದ್ಧಿ ಬಗ್ಗೆ ಆಲೋಚನೆ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಅಭಿವೃದ್ಧಿಯ ಚಿಂತನೆ:
ಈ ಹಿಂದೆ ಶಾಸಕನಾಗಿದ್ದಾಗ ಬ್ರಹ್ಮಾವರ ತಾಲೂಕು ಕೇಂದ್ರವಾಗಿ ಪರಿವರ್ತಿಸುವ ಚಿಂತನೆಯನ್ನು ಗಟ್ಟಿಗೊಳಿಸಿದ್ದೆ. ಗುಲ್ವಾಡಿ ಕಿಂಡಿ ಆಣೆಕಟ್ಟು ನಿರ್ಮಾಣ ಮಾಡಿದ್ದರಿಂದ ಇಂದು ಕುಂದಾಪುರ ಪುರಸಭೆಗೆ ಶಾಶ್ವತ ಕುಡಿಯುವ ನೀರು ದೊರಕಿದೆ. ಕುಂದಾಪುರ ಪುರಸಭೆ ಒಳಚರಂಡಿ ಯೋಜನೆ ಕೂಡಾ ಸಂಸದನಾಗಿದ್ದ ಕಾಲದಲ್ಲಿ ಮಂಜೂರಾಗಿತ್ತು. ಕಾರ‍್ಯಕರ್ತರು ಅಭಿವೃದ್ದಿ ಹಾಗೂ ಸಮಸ್ಯೆ ಬಗ್ಗೆ ಗಮನಕ್ಕೆ ತಂದರೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದ ಅವರು ರಾಜಕೀಯ ವೃತ್ತಿಯಾಗಿ ತೆಗೆದುಕೊಂಡರೆ ಪ್ರಾಮಾಣಿಕರಾಗಲು ಸಾಧ್ಯವಿಲ್ಲ. ಗ್ರಾಮ ಅಭಿವೃದ್ಧಿಯಾಗಬೇಕಿದ್ದರೆ ಕಾರ‍್ಯಕರ್ತರು ಹೆಚ್ಚು ಕೆಲಸ ಮಾಡಬೇಕು. ಕಾರ‍್ಯಕರ್ತರು ಚರ್ಚೆ ನಡೆಸಬೇಕಾದಲ್ಲಿ ದೂರವಾಣಿ ಮೂಲಕ ನೇರೆ ಸಂಪರ್ಕಿಸಿ. ಎಲ್ಲರೂ ಪಕ್ಷ ಸಂಘಟನೆಯಲ್ಲಿ ದುಡಿಯೋಣ ಎಂದು ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಬಲ ವಿರೋಧ ಪಕ್ಷದ ಅಗತ್ಯತೆ ಇದೆ. ಮತ, ಜಾತಿ, ಬಂಧುತ್ವದ ಮೇಲೆ ಮತ ಚಲಾಯಿಸಿದರೆ ಉತ್ತಮ ಜನಪ್ರತಿನಿಧಿ ಆಯ್ಕೆ ಅಸಾಧ್ಯ. ಆಡಳಿತ ಲೋಪದೋಷ ಬೆಟ್ಟು ಮಾಡಿ ತೋರಿಸುವ ಸಲಹೆ, ತಪ್ಪಿದರೆ ತಿದ್ದುವ ಕೆಲಸ ವಿರೋಧ ಪಕ್ಷ ಮಾಡಿದರೆ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದರು.
ಚುನಾವಣೆಯಲ್ಲಿ ಸೋತರೂ ಚಲಾವಣೆಯಲ್ಲಿದ್ದೇನೆ:
ನಾನು ಹಿಂದಿನ ಚುನಾವಣೆಯಲ್ಲಿ ಸೋತರೂ ಚಲಾವಣೆಯಲ್ಲಿದ್ದೇನೆ. ನನ್ನ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗೆಗೆ ಚಿಂತಿಸಿದ್ದೇನೆ. ಹಾಗಾಗಿಯೇ ಬಿಜೆಪಿ ಪಕ್ಷ ಸೇರುವಂತೆ ಆಹ್ವಾನಿಸಿದ್ದರು. ಆ ಸಂದರ್ಭದಲ್ಲಿ ತಾನು ಕಾಂಗ್ರೆಸ್ ಪಕ್ಷದಲ್ಲಿರಲಿಲ್ಲ. ಪಕ್ಷೇತರನಾಗಿದ್ದೆ. ಹಾಗಾಗಿ ತಾನು ಪಕ್ಷಾಂತರಿಯಾಗಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಹಾಲಾಡಿ-ಜೆಪಿ ಕೋಟಿ ಚೆನ್ನಯರಂತೆ: ಮಟ್ಟಾರು
ಬೆಂಗಳೂರಿನಲ್ಲಿ ನಡೆದ ರಾಜ್ಯ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪಾಲ್ಗೊಂಡಿದ್ದರು. ಬೆಂಗಳೂರು ಬಿಜೆಪಿ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಹಾಲಾಡಿ ಅವರಿಗೆ ಶಾಲು ಹೊದಿಸಿ ಬಿಜೆಪಿ ಸೇರಿಸಿಕೊಳ್ಳಲಾಗಿದೆ. ಕೋಟೇಶ್ವರ ಬಿಜೆಪಿ ಕಾರ‍್ಯಕ್ರಮದಲ್ಲೂ ಹಾಲಾಡಿ ಪಾಲ್ಗೊಂಡಿದ್ದು, ಕಾಂಗ್ರೆಸ್ ಸೇರುತ್ತಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಸುಳ್ಳು ಸುದ್ದಿ ಹರಡವವರ ವಿರುದ್ಧ ನಿರ್ಧಾಕ್ಷಣ್ಯ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ. ಪಕ್ಷವಿರೋಧಿ ಕೆಲಸ ಮಾಡಿದರೆ ನೋಟೀಸ್ ಜಾರಿ ಮಾಡಲಾಗುತ್ತದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಜಯಪ್ರಕಾಶ್ ಹೆಗ್ಡೆ ತುಳು ನಾಡಿನ ಕೋಟಿ-ಚೆನ್ನಯ್ಯರಂತೆ, ಹಕ್ಕಬುಕ್ಕರಂತಿದ್ದು, ಪಕ್ಷ ಕಟ್ಟುವ ಜೊತೆ ಉಡುಪಿ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲ್ಲಿಸಲಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಲಕ್ಷ್ಮೀ ಮಂಜು ಬಿಲ್ಲವ, ರಾಘವೇಂದ್ರ ಬಾರಿಕೆರೆ, ಸುಪ್ರಿಯಾ ಉದಯ ಕುಲಾಲ್, ಪ್ರತಾಪ್ ಹೆಗ್ಡೆ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಕಾಶ್ ಮೆಂಡನ್, ಕುಂದಾಪುರ ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ, ಪ್ರಧಾನ ಕಾರ‍್ಯದರ್ಶಿ ಭಾಸ್ಕರ ಬಿಲ್ಲವ, ಶಂಕರ ಅಂಕದಕಟ್ಟೆ, ಸುರೇಶ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ಬಿ. ಕಿಶೋರ್ ಕುಮಾರ್, ಖಜಾಂಚಿ ರವಿ ಅಮೀನ್, ಎಸ್ಸಿಎಸ್ಟಿ ಮೋರ್ಚಾ ಗೋಪಾಲ ಕಳಂಜೆ, ಮುಖಂಡ ಗಣಪತಿ ಶ್ರೀಯಾನ್ ಇದ್ದರು.