Kundapra.com ಕುಂದಾಪ್ರ ಡಾಟ್ ಕಾಂ

ಸರಕಾರಿ ಜಾಗ ಗುರುತಿಸಿ ನಿವೇಶನ ರಹಿತರಿಗೆ ಹಕ್ಕುಪತ್ರ ನೀಡಿ: ನಾಗರತ್ನ ನಾಡ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ದೇಶಕ್ಕೆ ಸ್ವಾತಂತ್ರ್ಯ ಬಂದು ೭ ದಶಕ ಪೂರೈಸುವ ಅವಧಿಯಲ್ಲಿದ್ದೇವೆ. ದೇಶದ ಮೂಲಭೂತ ಸೌಕರ‍್ಯಕ್ಕೆ ಕೇಂದ್ರ ರಾಜ್ಯ ಸರಕಾರ ಕೋಟ್ಯಾಂತರ ಹಣ ಖರ್ಚು ಮಾಡಿದೆ. ಆದಾಗ್ಯೂ ಈಗಲೂ ಬಡತನ, ನಿರುದ್ಯೋಗ ಹಸಿವು ಮಹಿಳೆಯರ ಮೇಲೆ ದೌರ್ಜನ್ಯ ಜಾತಿ ತಾರತಮ್ಯ ಅಸ್ಪೃಶ್ಯತೆ ಕಡಿಮೆಯಾಗಲಿಲ್ಲ. ಬದಲಿಗೆ ಹೆಚ್ಚುತ್ತಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗರತ್ನ ನಾಡ ಹೇಳಿದರು.

ಮನೆ ನಿವೇಶನ ರಹಿತರ ಅರ್ಜಿದಾರರ ಬೃಹತ್ ಸಮಾವೇಶವನ್ನು ಗಂಗೊಳ್ಳಿ ವಿರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ದೇಶಾದ್ಯಂತ ೨೦ ಕೋಟಿ, ರಾಜ್ಯದಲ್ಲಿ ೧ ಕೋಟಿಗೂ ಹೆಚ್ಚು ಕೃಷಿ ಕೂಲಿಕಾರರು ಇದ್ದಾರೆ. ಪ್ರತಿಯೊಬ್ಬನ ತಲೆ ಮೇಲೊಂದು ಸೂರು ನಮ್ಮ ಮೂಲಭೂತ ಹಕ್ಕು. ನಮ್ಮ ಹಕ್ಕನ್ನು ಪಡೆಯಲು ಹೋರಾಟ ಚಳವಳಿಯನ್ನು ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಬೈಂದೂರು ಹಾಗೂ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರ ಮನೆ ಮುಂದೆ ನಿವೇಶನ ರಹಿತರಿಂದ ಭೂಮಿ ಹಕ್ಕಿಗಾಗಿ ಧರಣಿ ಸತ್ಯಾಗ್ರಹ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ನಾಗರತ್ನ ನಾಡ ಹೇಳಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಯು. ದಾಸಭಂಡಾರಿ, ಮುಖಂಡರಾದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ನಿವೇಶನ ರಹಿತರು ನಿವೇಶನ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿ, ವರ್ಷ ೩ ಕಳೆದರೂ ಈ ತನಕ ಸರಕಾರಿ ಭೂಮಿಯನ್ನು ಗುರುತಿಸದ ಕಂದಾಯ ಇಲಾಖೆಯ ಕ್ರಮವನ್ನು ಖಂಡಿಸಿದರು. ಸಭೆಯಲ್ಲಿ ಕೃಷಿ ಕೂಲಿಕಾರರ ಸಂಘದ ಮುಖಂಡರಾದ ರಾಜೀವ ಪಡುಕೋಣೆ, ಪದ್ಮಾವತಿ ಶೆಟ್ಟಿ, ಕುಶಲ, ಶೀಲಾವತಿ, ಆನಂದ ಗಂಗೊಳ್ಳಿ ಉಪಸ್ಥಿತರಿದ್ದರು. ಕೃಷಿ ಕೂಲಿಕಾರರ ಸಂಘದ ಗಂಗೊಳ್ಳಿ ಗ್ರಾಮ ಸಮಿತಿಯ ಕಾರ್ಯದರ್ಶಿ ಅರುಣ ಗಂಗೊಳ್ಳಿ ಇವರು ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.

 

Exit mobile version