Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಬೈಪಾಸ್ ಮೇಲ್ಸೆತುವೆ ನಿರ್ಮಾಣಕ್ಕೆ ಸಂಸದರ ಶಿಫಾರಸ್ಸು, ಡಿಸಿ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಬೈಪಾಸ್ ಬಳಿ ಮೇಲ್ಸೆತುವೆ ನಿರ್ಮಾಣ ಮಾಡುವಂತೆ ಸ್ಥಳೀಯರು ಸಂಸದ ಯಡಿಯೂರಪ್ಪ ಅವರಿಗೆ ಈ ಹಿಂದೆ ನೀಡಲಾಗಿದ್ದ ಮನವಿಯ ಸಂಬಂಧ ಸಂಸದರ ಖಾಸಗಿ ಆಪ್ತ ಸಹಾಯಕ ಪುರುಷೋತ್ತಮ ಅವರು ಉಡುಪಿ ಜಿಲ್ಲಾಧಿಕಾರಿಯೊಂದಿಗೆ ಬೈಂದೂರಿಗೆ ಭೇಟಿ ನೀಡಿ ಚರ್ಚಿಸಿದರು.

ಮೇಲ್ಸೆತುವೆ ನಿರ್ಮಾಣಕ್ಕೆ ಸಂಸದರ ಶಿಪಾರಸ್ಸು:
ಕೇಂದ್ರ ಹೆದ್ದಾರಿ ಸಚಿವರೊಂದಿಗೆ ಚರ್ಚಿಸಿರುವ ಸಂಸದರು ಗುತ್ತಿಗೆದಾರ ಕಂಪೆನಿಗೆ ಶಿಪಾರಸ್ಸು ಪತ್ರ ನೀಡಿದ್ದಾರೆ. ಈ ಸಂಬಂಧ ಗುತ್ತಿಗೆದಾರ ಕಂಪೆನಿಯ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಚರ್ಚಿಸುವ ಸಲುವಾಗಿ ಮೇಲ್ಸೇತುವೆ ಕಾಮಗಾರಿಗೆ ಶೀಘ್ರ ಅಂದಾಜು ಪಟ್ಟಿ ತಯಾರಿಸಿ, ಕಾಮಗಾರಿಗೆ ಅಗತ್ಯ ಕ್ರಮ ಕೈಗೆತ್ತಿಕೊಳ್ಳುವಂತೆ ಚತುಷ್ಪಥ ಹೆದ್ದಾರಿ ಗುತ್ತಿಗೆದಾರ ಕಂಪೆನಿಯ ಅಧಿಕಾರಿಗಳಿಗೆ ಸಂಸದರ ನಿರ್ದೇಶನದಂತೆ ಅವರ ಆಪ್ತ ಸಹಾಯಕ ಸೂಚಿಸಿದರು.

ಸಂತ್ರಸ್ಥ ಕುಟುಂಬದ ಪರಿಹಾರಕ್ಕೆ ಕ್ರಮ ಕೈಗೊಳ್ಳಿ:
ಸ್ಥಳದಲ್ಲಿದ್ದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರೊಂದಿಗೆ ಅಳಲು ತೋಡಿಕೊಂಡ ಸ್ಥಳೀಯರು ಚತುಷ್ಪಥ ಕಾಮಗಾರಿಯಿಂದಾಗಿ ಭೂಮಿ ಕಳೆದುಕೊಂಡ ಸಂತೃಸ್ತ ಕುಟುಂಬಗಳಿಗೆ ನೀಡಲಾದ ಪರಿಹಾದ ಮೊತ್ತದಲ್ಲಿ ವ್ಯತ್ಯಾಸವಿದೆ. ಕಳೆದ ವರ್ಷ ಬೈಂದೂರು ವ್ಯಾಪ್ತಿಯಲ್ಲಿ ಪ್ರತಿ ಸೆಂಟ್ಸ್‌ಗೆ ೧.೨೫ ರಿಂದ ೧.೫ ಲಕ್ಷ ರೂ. ವರೆಗೆ ಪರಿಹಾರ ನೀಡಲಾಗುತ್ತಿತ್ತು, ಆದರೆ ಈ ಬಾರಿ ಕೇವಲ ೧೨ ರಿಂದ ೩೦ ಸಾವಿರ ರೂ. ವರೆಗೆ ಮಾತ್ರ ನೀಡುತ್ತಿದ್ದಾರೆ, ಅಲ್ಲದೇ ಕೆಲವು ಜಾಗದಲ್ಲಿ ಚಿಕ್ಕಾಸೂ ಪರಿಹಾರ ನೀಡದೇ ಗುತ್ತಿಗೆದಾರ ಕಂಪನಿ ಚರಂಡಿ ಕಾಮಗಾರಿ ನಡೆಸುತ್ತಿದೆ ಎಂದು ಗ್ರಾಮಸ್ಥರು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಸಂತೃಸ್ತ ಕುಟುಂಬಗಳಿಗೆ ಪರಿಹಾರ ನೀಡದೆ ಒಂದಿಂಚು ಭೂಮಿಯನ್ನು ಸ್ವಾನಪಡಿಸಿಕೊಳ್ಳಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಕೊಲ್ಲೂರು ಬೈಪಾಸ್‌ನಲ್ಲಿ ಸರ್ವಿಸ್ ರಸ್ತೆ ಹೆಚ್ಚಿಸಬೇಕೆಂಬ ಬೇಡಿಕೆಗೆ ಈ ಬಗ್ಗೆ ಸ್ಥಳದಲ್ಲಿಯೇ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ವಿಸ್ ರಸ್ತೆ ಹೆಚ್ಚಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಬಿ. ಎಂ. ಸುಕುಮಾರ ಶೆಟ್ಟಿ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಜಿ.ಪಂ. ಸದಸ್ಯರಾದ ಶಂಕರ ಪೂಜಾರಿ, ಸುರೇಶ ಬಟ್ವಾಡಿ, ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಕುಂದಾಪುರ ಉಪವಿಭಾಗಾಕಾರಿ ಶಿಲ್ಪಾ ನಾಗ್, ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ್ ಗೌರಯ್ಯ, ಹೆದ್ದಾರಿ ಪ್ರಾಕಾರದ ಅಧಿಕಾರಿಗಳು, ಚತುಷ್ಪತ ಕಾಮಗಾರಿ ಗುತ್ತಿಗೆ ಪಡೆದ ಐಆರ್‌ಬಿ ಕಂಪೆನಿಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

Exit mobile version