Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಹಾಗೂ ಗಂಗೊಳ್ಳಿ – ಬೆಂಗಳೂರು ಕೆಎಸ್‌ಆರ್‌ಟಿಸಿ ಬಸ್‌ ಸೇವೆಗೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಹಾಗೂ ಗಂಗೊಳ್ಳಿಯಿಂದ ಕುಂದಾಪುರ, ಉಡುಪಿ ಮಂಗಳೂರು ಮಾರ್ಗವಾಗಿ ಬೆಂಗಳೂರು ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೊಸತಾಗಿ ಎರಡು ಸ್ಕ್ಯಾನಿಯಾ ಐರಾವತ್ ಬಸ್ಸುಗಳನ್ನು ಬಿಡಲಾಗಿದ್ದು, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅವರು ಇಂದು ಬೈಂದೂರು ಹಾಗೂ ಗಂಗೊಳ್ಳಿಯಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಹೊಸ ಬಸ್ಸುಗಳನ್ನು ಹಾಕಲಾಗುತ್ತಿದ್ದು, ಬೈಂದೂರು ಹಾಗೂ ಗಂಗೊಳ್ಳಿ ಜನರ ಬೇಡಿಕೆಯಂತೆ ಈ ಭಾಗಕ್ಕೂ ಎರಡು ಐಶಾರಾಮಿ ಬಸ್ಸುಗಳನ್ನು ಹಾಕಲಾಗಿದೆ. ಗ್ರಾಮೀಣ ಪ್ರದೇಶಕ್ಕೆ ನಿಗಮದಿಂದ ನೂತನವಾಗಿ ಮಿನಿ ಬಸ್ಸುಗಳನ್ನು ಬಿಡುವ ಯೋಜನೆ ಇದ್ದು ಶೀಘ್ರದಲ್ಲಿಯೇ ಬೇಡಿಕೆಗನುಗುಣವಾಗಿ ಅನುಷ್ಠಾನಗೊಳ್ಳಲಿದೆ ಎಂದರು.

ತಾಲೂಕು ಕೇಂದ್ರವಾಗಲಿರುವ ಬೈಂದೂರು ಪಟ್ಟಣಕ್ಕೆ  ಅಗತ್ಯ ಸೌಕರ್ಯಗಳನ್ನು ಪೂರೈಸಲಾಗುವುದು. ಬೈಂದೂರಿನಲ್ಲಿ ನಿಗದಿಪಡಿಸಲಾಗಿರುವ ಜಾಗದ ಆರ್.ಟಿ.ಸಿ ನಿಗಮಕ್ಕೆ ವರ್ಗಾವಣೆ ಆದ ತಕ್ಷಣವೇ ಡಿಪೋ ಹಾಗೂ ಬಸ್ ನಿಲ್ದಾಣಕ್ಕೆ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದ ಅವರು ಬೈಂದೂರು ಹೋಬಳಿಯನ್ನು ಮಾತ್ರವೇ ತಾಲೂಕು ಕೇಂದ್ರವಾಗಿ ಮಾಡಲಾಗುತ್ತಿದ್ದು, ಆ ಬಗ್ಗೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಇತರ ಹಳ್ಳಿಗಳ ಜನರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯರುಗಳಾದ ವಿಜಯ ಶೆಟ್ಟಿ, ರಾಜು ದೇವಾಡಿಗ, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಡಿಸಿ ವಿವೇಕಾನಂದ ಹೆಗ್ಡೆ, ಕೆಎಸ್‌ಆರ್‌ಟಿಸಿ ಜಿಲ್ಲಾ ಸಂಚಾರಿ ಅಧಿಕಾರಿ ಜೈಶಾಂತ ಕುಮಾರ್, ಗ್ರಾ.ಪಂ ಸದಸ್ಯರುಗಳಾದ ಮಾಣಿಕ್ಯ ಹೋಬಳಿದಾರ್, ತಿಮ್ಮಪ್ಪ, ಎಪಿಎಂಸಿ ಸದಸ್ಯ ಸುರೇಶ್ ಹೋಬಳಿದಾರ್, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನಕುಮಾರ್, ಕಾರ್ಯದರ್ಶಿ ನಾಗರಾಜ ಗಾಣಿಗ, ಬೈಂದೂರು ನಾಗರಿಕ ವೇದಿಕೆಯ ವೆಂಕಟೇಶ ಕಿಣಿ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕೆ.ವಿ., ಗೋಕುಲ್ ಶೆಟ್ಟಿ, ವಿಠ್ಠಲ್ ಮಯ್ಯಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬೈಂದೂರಿನಿಂದ ಗಂಗೊಳ್ಳಿಯ ತನಕ ನೂತನ ಬಸ್ಸಿನಲ್ಲಿಯೇ ಪ್ರಯಾಣಿಸಿದ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಗೋಪಾಲ ಪೂಜಾರಿ ಅವರನ್ನು ಉಪ್ಪುಂದ, ಕಂಬದಕೋಣೆ, ನಾಗೂರು, ಮರವಂತೆ, ಗಂಗೊಳ್ಳಿಯಲ್ಲಿ ಸಾರ್ವಜನಿಕರು ಬರಮಾಡಿಕೊಂಡು ಗೌರವಿಸಿದರು.

      

Exit mobile version