Kundapra.com ಕುಂದಾಪ್ರ ಡಾಟ್ ಕಾಂ

ಜನ ಜಾಗೃತಿಯಿಂದ ಅವ್ಯವಹಾರಕ್ಕೆ ಅಂಕುಶ: ಮರವಂತೆ ಗ್ರಾಮಸಭೆಯಲ್ಲಿ ಅಧ್ಯಕ್ಷೆ ಅನಿತಾ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮಸಭೆಯಲ್ಲಿ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು. ಅವರು ಜಾಗೃತರಾಗಿದ್ದರೆ ಊರಿನಲ್ಲಿ ನಡೆಯುವ ಕಳಪೆ ಕಾಮಗಾರಿ, ಅವ್ಯವಹಾರಕ್ಕೆ ತಡೆಯಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ ಹೇಳಿದರು. ಮರವಂತೆ ಗ್ರಾಮ ಪಂಚಾಯತ್ ಸುವರ್ಣ ಸೌಧದ ಅಟಲ್‌ಬಿಹಾರಿ ವಾಜಪೇಯಿ ವೇದಿಕೆಯಲ್ಲಿ ನಡೆದ ಎರಡನೆ ಸುತ್ತಿನ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು.

ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರ ಆಚಾರ್ಯ ಸ್ವಾಗತಿಸಿ, ಪ್ರಥಮ ಸುತ್ತಿನ ಗ್ರಾಮಸಭೆಯ ವರದಿ ಮಂಡಿಸಿದರು. ಕರಸಂಗ್ರಾಹಕ ಶೇಖರ್ ಮರವಂತೆ ವಾರ್ಡ್‌ಸಭೆಯ ನಡಾವಳಿ, ಪ್ರಸಕ್ತ ಸಾಲಿನ ಕ್ರಿಯಾಯೋಜನೆ ಹಾಗೂ ಪ್ರಗತಿಯ ವಿವರ ನೀಡಿದರು. ಪಶು ವೈದ್ಯಾಧಿಕಾರಿ ಡಾ. ಅರುಣ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸವಿತಾ ಶೆಟ್ಟಿ ಇಲಾಖೆಯ ಯೋಜನೆಗಳ ಮಾಹಿತಿ ನೀಡಿದರು. ಮಾರ್ಗದರ್ಶಿ ಅಧಿಕಾರಿಯಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ ಗ್ರಾಮಸಭೆಯಲ್ಲಿ ಮಾತನಾಡುವಾಗ ಜನರು ಸಂಯಮ ವಹಿಸಿದರೆ ಚರ್ಚೆಯ ಗುಣಮಟ್ಟ ಹೆಚ್ಚುವುದೆಂದು ಸಲಹೆಯಿತ್ತರು.

ಅಹವಾಲುಗಳನ್ನು ಮುಂದಿಟ್ಟ ಸಂಜೀವ ಖಾರ್ವಿ ಪಂಚಾಯತ್ ನೀಡಬೇಕಾದ ದೃಢೀಕರಣಗಳು ಸರಿಯಾಗಿ ಸಿಗುತ್ತಿಲ್ಲ ಎಂದು ದೂರಿದರು. ಎಂ. ಕೆ. ದೇವಾಡಿಗ, ಪುಟ್ಟಯ್ಯ ಬಿಲ್ಲವ, ಮನ್ಸೂರ್ ಇಬ್ರಾಹಿಂ, ನಾಗರಾಜ್ ರಸ್ತೆಬದಿಯಲ್ಲಿ ಅಂಗಡಿಗಳನ್ನು ನಿರ್ಮಿಸಿಕೊಂಡು ವ್ಯಾಪಾರ ನಡೆಸುವವರಿಗೆ ಪಂಚಾಯತ್ ಅನುಮತಿ ನೀಡಬೇಕೆಂದು ಒತ್ತಾಯಿಸಿದರು. ಚಂದ್ರಶೇಖರ ಖಾರ್ವಿ ನಂದಿಕೇಶ್ವರ ಮಾರ್ಗದಲ್ಲಿ ನಡೆಯುತ್ತಿರುವ ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸಿದರು. ಮಂಜು ಪೂಜಾರಿ ಅರ್ಧಕ್ಕೆ ನಿಂತ ಹರಿಶ್ಚಂದ್ರ ಮಾರ್ಗದ ಡಾಂಬರೀಕರಣ ಮುಂದುವರಿಯಬೇಕು ಎಂದು ಆಗ್ರಹಿಸಿದರು. ವಿಜಯ ಕ್ರಾಸ್ತಾ ಸೋಲಾರ್ ಬೀದಿದೀಪ ದುಬಾರಿ ಆಗುವುದರಿಂದ ವಿದ್ಯುತ್ ದೀಪಗಳಿಗೆ ಆದ್ಯತೆ ನೀಡಬೇಕು ಎಂದರು. ವೀರೇಶ್ ಬಿಲ್ಲವ ಸಾಧನಾ ಮಾರ್ಗ, ಗೋರಿಕೆರೆ ಬಳಿ ಸೋಲಾರ್ ದೀಪಗಳ ಅಳವಡಿಕೆಗೆ, ಉದಯ ಪೂಜಾರಿ ಮಹಾತ್ಮ ಗಾಂಧಿ ಮಾರ್ಗದ ದುರಸ್ತಿಗೆ ಬೇಡಿಕೆ ಮುಂದಿಟ್ಟರು. ಗ್ರಾಮ ಪಂಚಾಯತ್‌ಗೆ ರಸ್ತೆ ನಾಮಕರಣಕ್ಕೆ ಅಧಿಕಾರಿ ಇದೆ ಎಂಬ ಕಾರಣಕ್ಕೆ ರಸ್ತೆಗೆ ಸ್ಥಳದಾನ ಮಾಡಿದವರ ಬೇಡಿಕೆ ತಿರಸ್ಕರಿಸುವ ಪಂಚಾಯತ್ ನಿಲುವಿಗೆ ಸದಾನಂದ ಬಿಲ್ಲವ ಆಕ್ಷೇಪ ವ್ಯಕ್ತಪಡಿಸಿದರು. ಮಾಜಿ ಅಧ್ಯಕ್ಷ ಎಸ್. ಜನಾರ್ದನ ವರದಿಯ ಗುಣಮಟ್ಟ ಹೆಚ್ಚಿಸಬೇಕು, ಅನುಪಾಲನಾ ವರದಿ ನೀಡಬೇಕು, ವಾರ್ಡುವಾರು ಕಾಮಗಾರಿ ವಿವರ ಕೊಡಬೇಕು ಎಂದು ಸಲಹೆಯಿತ್ತರು. ಶಕುಂತಲಾ ಪೂಜಾರಿ ತಮ್ಮ ಮನೆಗೆ ವಿದ್ಯುತ್ ಪಡೆಯಲು ನಿರಾಕ್ಷೇಪಣಾ ಪತ್ರ ನಿರಾಕರಿಸುತ್ತಿರುವ ಬಗ್ಗೆ ಅಧಿಕಾರಿ ಮತ್ತು ಸದಸ್ಯರ ಜತೆ ವಾಗ್ವಾದ ನಡೆಸಿದರು.

ಹರಿಶ್ಚಂದ್ರ ಆಚಾರ್ಯ ನಿರೂಪಿಸಿ, ಶೇಖರ್ ಮರವಂತೆ ವಂದಿಸಿದರು. ಉಪಾಧ್ಯಕ್ಷ ಗಣೇಶ ಪೂಜಾರಿ, ಸದಸ್ಯರು, ಸಿಬ್ಬಂದಿ ಇದ್ದರು. ೧೮ಕ್ಕೆ ನಿಗದಿಯಾಗಿದ್ದ ಸಭೆ ಕೋರಂ ಅಭಾವದಿಂದ ಶನಿವಾರ ನಡೆದಿದ್ದು, ಸಾಕಷ್ಟು ಸಂಖ್ಯೆಯ ಗ್ರಾಮಸ್ಥರು ಬಂದಿದ್ದರು.

Exit mobile version