Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ಸುತ್ತಲಿನ ಪರಿಸರ ಸ್ವಚ್ಛತಾ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಸ್ಥಳೀಯ ಗ್ರಾಪಂ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಸ್ವ-ಸಹಾಯ ಗುಂಪುಗಳು, ಮಹಿಳಾ ಮಂಡಲ, ಆರೋಗ್ಯ ಕೇಂದ್ರ, ಪೋಲಿಸ್ ಇಲಾಖೆ, ವನ್ಯಜೀವಿ ವಲಯ, ದೇವಳದ ಕಾಲೇಜು ಹಾಗೂ ಪ್ರೌಢಶಾಲೆ, ಶ್ರೀಮೂಕಾಂಬಿಕಾ ವ್ಯ.ಸೇ.ಸ.ಸಂಘ ಮತ್ತು ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಅಭಿಯಾನಕ್ಕೆ ಚಾಲನೆ ನೀಡಿದರು. ಕೊಲ್ಲೂರು ವರ್ಷದುದ್ದಕ್ಕೂ ಅಮಿತಸಂಖ್ಯೆಯ ಶ್ರದ್ಧಾವಂತರನ್ನು ಆಕರ್ಷಿಸುವ ಪವಿತ್ರ ತೀಥಕ್ಷೇತ್ರ, ಇದು ದಕ್ಷಿಣ ಭಾರತದ ಒಂದು ಅತಿಪ್ರಮುಖ ಯಾತ್ರಾ ಕೇಂದ್ರವೂ ಹೌದು. ತನ್ನ ನಿಸರ್ಗಶುದ್ಧ ಪರಿಸರಕ್ಕೆ ಹೆಸರುವಾಸಿಯಾಗಿದ್ದ ಮಾತೆ ಮುಕಾಂಬಿಕೆಯ ಮನೆಯಾಗಿರುವ ಈ ಕ್ಷೇತ್ರದ ಪರಿಸರವು ಅನುಗಾಲವೂ ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.

ಸ್ಥಳೀಯ ಠಾಣಾಧಿಕಾರಿ ಶೇಖರ್ ಮಾತನಾಡಿ, ಸ್ವಸ್ಥ ಭಾರತದ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಮೊದಲಾಗಿ ತಮ್ಮ ಮನೆ, ಪರಿಸರ ಸ್ವಚ್ಛಮಾಡುವುದರ ಮೂಲಕ ಇತರರಿಗೆ ಮಾದರಿಯಾಗಬೇಕು. ಮಾಲಿನ್ಯ ರಹಿತ ಪರಿಸರ ನಿರ್ಮಾಣ ಮಾಡುವತ್ತ ಪ್ರಯತ್ನಗಳು ನಡೆಯಬೇಕಿದೆ ಎಂದರು.

ಕೊಲ್ಲೂರು ದೇವಳದ ಎಇಒ ಎಚ್. ಕೃಷ್ಣಮೂರ್ತಿ, ಗ್ರಾಪಂ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಮಾವಿನಕಾರ್, ಸದಸ್ಯರಾದ ಪ್ರೇಮಾ, ನೇತ್ರಾವತಿ, ಎಸ್. ಕುಮಾರ್, ಪ್ರಕಾಶ್ ಪೂಜಾರಿ, ಪಿಡಿಒ ಅನ್ನಮ್ಮ, ಠಾಣಾಧಿಕಾರಿ ಶೇಖರ್, ಅರಣ್ಯ ಇಲಾಖಾ ಸಿಬ್ಬಂದಿಗಳು, ಮಹಿಳಾ ಮಂಡಲದ ಅಧ್ಯಕ್ಷೆ ಪ್ರಸನ್ನ ಶರ್ಮಾ, ಸ್ವ-ಸಹಾಯ ಮತ್ತು ಧಗ್ರಾಯೋ ಸದಸ್ಯೆಯರು, ವ್ಯವಸಾಯ ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕರು ವ್ಯಾಪಾರಸ್ಥರು ಪಾಲ್ಗೊಂಡು ಸ್ವಚ್ಛತೆಗೆ ಕೈಜೋಡಿಸಿದರು. ಸುಬ್ರಹ್ಮಣ್ಯ ಪಡುಕೋಣೆ ನಿರ್ವಹಿಸಿದರು.

Exit mobile version