Kundapra.com ಕುಂದಾಪ್ರ ಡಾಟ್ ಕಾಂ

ಸಂಪತ್ತು ನೀಡುವ ಕೊಡುಗೆಗೆ ಮಿತಿಯಿದೆ: ಜನಾರ್ದನ ಮರವಂತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಪತ್ತು ಮಾನವನಿಗೆ ಎಲ್ಲ ಸುಖ, ಸೌಲಭ್ಯಗಳನ್ನು ನೀಡುತ್ತದೆ ಎಂದು ನಂಬುವುದರಿಂದ ಅದರ ಗಳಿಕೆಗೆ ಎಲ್ಲಿಲ್ಲದ ಆದ್ಯತೆ ನೀಡಲಾಗುತ್ತಿದೆ. ಅದರ ಪರಿಣಾಮವಾಗಿ ಜನರು ಅತಿಗಳಿಕೆ ಹಾಗೂ ಸಂಚಯದ ದಾರಿ ಹಿಡಿಯುತ್ತಾರೆ. ಶಿಕ್ಷಣವನ್ನೂ ಸಂಪತ್ತು ಗಳಿಗೆಯ ಸಾಧನವೆಂದು ಭಾವಿಸಲಾಗುತ್ತದೆ. ಆದರೆ ಸಂಪತ್ತು ತಂದುಕೊಡಬಹುದಾದ ಸುಖ, ಸೌಲಭ್ಯಗಳಿಗೆ ಮಿತಿ ಇದೆ ಎನ್ನುವುದಕ್ಕೆ ಹಲವು ನಿದರ್ಶನಗಳು ಸಿಗುತ್ತವೆ. ಜನರು ಸಂತೃಪ್ತಿಯಿಂದ ಬದುಕಲು ಅಗತ್ಯವೆನಿಸುವಷ್ಟು ದುಡಿಯುವುದು ಶ್ರೇಯಸ್ಕರ ಎಂದು ಭಾರತೀಯ ಪರಂಪರೆ ಸಾರಿದೆ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು.

ಹೊಂಬಾಡಿಯ ಕಾಮತ್ ಪಾಲಿಟೆಕ್ನಿಕ್ ವಾರ್ಷಿಕೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು. ಉದ್ಘಾಟಿಸಿದ ಕಾಲೇಜು ಆಡಳಿತ ಮಂಡಳಿಯ ಮುಖ್ಯಸ್ಥ ಕೆ. ದೇವದಾಸ್ ಕಾಮತ್ ಗ್ರಾಮಾಂತರ ಪ್ರದೇಶದಲ್ಲಿರುವ ಪಾಲಿಟೆಕ್ನಿಕ್ ಎಲ್ಲ ಮೂಲ ಸೌಲಭ್ಯಗಳನ್ನು ಹೊಂದಿದ್ದು ವಿದ್ಯಾರ್ಥಿಗಳಿಂದ ಕನಿಷ್ಠ ಶುಲ್ಕ ಪಡೆದು ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತಿದೆ ಎಂದರು. ಉಪಸ್ಥಿತರಿದ್ದ ಭೂಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಸ್. ದಿನಕರ ಶೆಟ್ಟಿ ಶುಭ ಹಾರೈಸಿದರು. ಪ್ರಾಂಶುಪಾಲ ರಾಮಚಂದ್ರ ಎಚ್. ಎನ್ ವರದಿ ಓದಿದರು. ಉಪನ್ಯಾಸಕರಾದ ರವಿ ವಂದಿಸಿದರು. ಸುಪರ್ಣಾ ಜಿ. ಬಂಗೇರ ಮತ್ತು ಮಾನಸ ಎ. ಶೆಟ್ಟಿ ನಿರೂಪಿಸಿದರು. ವಾರ್ಷಿಕೋತ್ಸವ ನಿಮಿತ್ತ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವು.

Exit mobile version