Kundapra.com ಕುಂದಾಪ್ರ ಡಾಟ್ ಕಾಂ

ಸಾಲ ತೀರಿಸುವುದಕ್ಕಾಗಿ ಮಹಿಳೆಯ ಸರ ಅಪಹರಿಸಲು ಯತ್ನ. ಬಂಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಇಬ್ಬರು ಸರಗಳ್ಳರನ್ನು ಕೋಟ ಪೊಲೀಸ್‌ ಠಾಣೆಯ ಸಿಬ್ಭಂದಿಯೋರ್ವರು ಸಾಹಸ ಮೆರೆದು ಬಂಧಿಸಿದ್ದು, ಆರೋಪಿಗಳನ್ನು ಬುಧವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ನಾವುಂದ ನಿವಾಸಿಗಳಾದ ನಾಗೇಶ ಖಾರ್ವಿ(22), ಮಧುಕರ ಖಾರ್ವಿ (25) ಆರೋಪಿಗಳು. ಬೈಕ್‌ನಲ್ಲಿ 15 ಕಿ.ಮೀ. ಬೆನ್ನಟ್ಟಿ ಬಂಧನ ಆರೋಪಿಗಳು ಸೋಮವಾರ ರಾತ್ರಿ ಪಲ್ಸರ್‌ ಬೈಕ್‌ನಲ್ಲಿ ಬಂದು ಸಾಲಿಗ್ರಾಮ ಸಮೀಪ ಕಾರ್ಕಡ ಹಿ.ಪ್ರಾ. ಶಾಲೆ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವಳ ಕುತ್ತಿಗೆಯಿಂದ ಸರ ಅಪಹರಿಸಲು ಪ್ರಯತ್ನಿಸಿದ್ದು, ಈ ಸಂದರ್ಭ ಆಕೆ ಜೋರಾಗಿ ಕೂಗಿಕೊಂಡಿದ್ದರು. ಆಗ ಸಮೀಪ ಕರ್ತವ್ಯ ನಿರತರಾಗಿದ್ದ ಕೋಟ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಪ್ರದೀಪ್‌ ನಾಯಕ್‌ ಬೈಕ್‌ನಲ್ಲಿ ಅವರನ್ನು ಬೆನ್ನಟ್ಟಿದ್ದು, ಆರೋಪಿಧಿಗಳು ಬೈಕಿನಲ್ಲಿ ಬ್ರಹ್ಮಾವರ ಕಡೆಗೆ ವೇಗವಾಗಿ ಸಾಗಿದರು. ಅನಂತರ ಬ್ರಹ್ಮಾವರ ಆಕಾಶವಾಣಿ ಸರ್ಕಲ್‌ನಿಂದ ಬಾಕೂìರು ರಸ್ತೆಯ ಮೂಲಕ ಪರಾರಿಯಾಗಲು ಯತ್ನಿಸಿದಾಗ ಪ್ರದೀಪ್‌ ನಾಯಕ್‌ ಕೂಡ ಅಷ್ಟೇ ವೇಗದಲ್ಲಿ ಅವರನ್ನು ಬೆನ್ನಟ್ಟಿ ಘಟನೆ ಈ ಕುರಿತು ಸ್ಥಳೀಯರಿಗೆ ಹಾಗೂ ಉನ್ನತ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಬಾರ್ಕೂರು ಕಲ್ಲುಚಪ್ಪರ ಬಳಿ ಆರೋಪಿಗಳು ಬೈಕನ್ನು ಕಾಳಿಕಾಂಬಾ ದೇವಸ್ಥಾನದ ಒಳರಸ್ತೆಗೆ ತಿರುಗಿಸಿದರು. ಶರಣಾಗುವಂತೆ ಸೂಚಿಸಿದರೂ ಕೇಳದೆ ಮುಂದೆ ಸಾಗಿದಾಗ ಮೂಡುಕೇರಿ ಸಮೀಪ ಇಕ್ಕಟ್ಟಾದ ರಸ್ತೆಯಲ್ಲಿ ಬೈಕ್‌ ನಿಯಂತ್ರಣ ತಪ್ಪಿ ಕೆಳಗೆ ಬಿತ್ತು. ಈ ಸಂದರ್ಭ ಸ್ಥಳೀಯರ ನೆರವಿನೊಂದಿಗೆ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ಆರೋಪಿಗಳು ಈ ಹಿಂದೆ ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯ ನಾಲ್ಕು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಹಾಗೂ ಒಂಟಿ ಮಹಿಳೆಯರನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿ ದ್ದರು ಎನ್ನಲಾಗಿದೆ.

ಸಾಲ ತೀರಿಸುವುದಕ್ಕಾಗಿ ಕಳವು :
ಮಧುಕರ ಪದವಿ ಶಿಕ್ಷಣವನ್ನು ಅರ್ಧದಲ್ಲೇ ಮೊಟಕು ಗೊಳಿಸಿದ್ದು, ನಾಗೇಶ್‌ ಎಸೆಸೆಲ್ಸಿ ಮುಗಿಸಿದ್ದ. ಅವರಿಬ್ಬರು ಸಹೋದರ ಸಂಬಂಧಿಗಳಾಗಿದ್ದು ದೋಣಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಲವನ್ನು ತೀರಿಸಲು ಕಳ್ಳತನ ನಡೆಸುತ್ತಿದ್ದರು. ಕದ್ದ ಚಿನ್ನವನ್ನು ಮಂಗಳೂರಿನ ಖಾಸಗಿ ಜುವೆಲರಿಯೊಂದರಲ್ಲಿ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್‌ ಅವರ ನೇತೃತ್ವದಲ್ಲಿ ಕೋಟ ಠಾಣಾಧಿಕಾರಿ ಹಾಗೂ ಸಿಬಂದಿ ವಿಚಾರಣೆ ನಡೆಸಿದ್ದಾರೆ. ಆರೋಪಿಗಳಿಗೆ ಒಂದು ವಾರಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸುಮಾರು 15 ಕಿ.ಮೀ. ವರೆಗೆ ಬೆನ್ನಟ್ಟಿ, ಆರೋಪಿಗಳನ್ನು ಬಂಧಿಸಿದ ಹೆಡ್‌ ಕಾನ್‌ಸ್ಟೆಬಲ್‌ ಪ್ರದೀಪ್‌ ನಾಯಕ್‌ ಅವರ ಸಾಹಸಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು, ಸಾಹಸ ಮೆರೆದ ಅವರಿಗೆ ಸೂಕ್ತ ಗೌರವ ನೀಡಬೇಕು ಎನ್ನುವ ಮಾತುಗಳು ಕೇಳಿಬಂದಿದೆ.

 

Exit mobile version