Kundapra.com ಕುಂದಾಪ್ರ ಡಾಟ್ ಕಾಂ

ವಲಸೆ ಕಾರ್ಮಿಕರು ಸ್ವತ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ: ಶಿಲ್ಪಾ ನಾಗ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಲಸೆ ಕಾರ್ಮಿಕ‌ರು ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಹಾಗೂ ಜಾಗೃತಿ ವಹಿಸಬೇಕು. ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ನೈರ್ಮಲ್ಯದ ಸಮಸ್ಯೆಯಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಸೊಳ್ಳೆಗಳಿಂದ ಮಲೇರಿಯಾ, ಫೈಲೇರಿಯಾ, ಡೆಂಗ್ಯೂ ಮೊದಲಾದ ಸಾಂಕ್ರಾಮಿಕ ರೋಗಗಳು ಹಬ್ಬುತ್ತಿದ್ದು, ಈ ಬಗ್ಗೆ ಜನರು ಎಚ್ಚರ ವಹಿಸಬೇಕು ಮುಖ್ಯವಾಗಿ ಸ್ವತ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರೊಂದಿಗೆ ಕಾರ್ಮಿಕರು ರೋಗ ವಾಹಕ ಆಶ್ರಿತ ರೋಗಗಳ ಬಗ್ಗೆ ಅರಿವು ಪಡೆದಿರಬೇಕಾದ ಆವಶ್ಯಕತೆ ಇದೆ ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಕಮಿಷನರ್‌ ಶಿಲ್ಪಾ ನಾಗ್‌ ಹೇಳಿದರು.

ಅವರು ಕುಂದಾಪುರ ನೆಹರೂ ಮೈದಾನದಲ್ಲಿ ಜಿ.ಪಂ. ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಉಡುಪಿ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಕುಂದಾಪುರ, ಪೊಲೀಸ್‌ ಇಲಾಖೆ ಕುಂದಾಪುರ, ಜೆಸಿಐ ಕುಂದಾಪುರ ಸಿಟಿ, ಭಂಡಾರ್‌ಕಾರ್ಸ್‌ ಕಾಲೇಜು ಕುಂದಾಪುರ ಇವರ ಸಹಭಾಗಿತ್ವದಲ್ಲಿ ವಲಸೆ ಕಾರ್ಮಿಕರಿಗೆ ರೋಗವಾಹಕ ಆಶ್ರಿತ ರೋಗಗಳ ಬಗ್ಗೆ ಅರಿವು ಹಾಗೂ ಡಯಾಬಿಟಿಕ್‌ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಶಿಬಿರದಲ್ಲಿ ಕುಂದಾಪುರದ ಸುಮಾರು 150ಕ್ಕೂ ಅಧಿಕ ವಲಸೆ ಕಾರ್ಮಿಕರು ಡಯಾಬಿಟಿಕ್‌ ತಪಾಸಣೆಯನ್ನು ನಡೆಸಿದರು.ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಪುರಸಭೆಯ ಅಧ್ಯಕ್ಷೆ ವಸಂತಿ ಸಾರಂಗ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಪ್ರೇಮಾನಂದ ಕೆ., ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಉದಯಶಂಕರ್‌, ಭಂಡಾರ್‌ಕಾರ್ಸ್‌ ಕಾಲೇಜಿನ ಎನ್‌.ಎಸ್‌.ಎಸ್‌. ಅಧಿಕಾರಿ ರಾಮಚಂದ್ರ, ಪತ್ರಕರ್ತರಾದ ಯು.ಎಸ್‌. ಶೆಣೈ, ಜಾನ್‌ ಡಿ’ಸೋಜಾ ಉಪಸ್ಥಿತರಿದ್ದರು.ಈ ಸಂದರ್ಭ ವಲಸೆ ಕಾರ್ಮಿಕರಾದ ಚಂದ್ರಕಾಂತ ಮನಗೋಳಿ, ಬಸವ ಸೋಮನಕೊಪ್ಪ, ರಮೇಶ್‌ ರಾಮದುರ್ಗ, ಲಕ್ಷ್ಮೀ ಮಮತಕೇರಿ, ಸುಮಾ ಮಮತಕೇರಿ ಅವರಿಗೆ ಶ್ರಮಿಕ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕುಂದಾಪುರ ಜೇಸಿಐ ಕುಂದಾಪುರ ಸಿಟಿ ಇದರ ಅಧ್ಯಕ್ಷ ಶ್ರೀಧರ ಸುವರ್ಣ ಸ್ವಾಗತಿಸಿದರು. ತಾ| ಆರೋಗ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುರು ಕಾರ್ಯಕ್ರಮ ನಿರ್ವಹಿಸಿದರು. ಜೇಸಿಐ ಸಿಟಿ ಸ್ಥಾಪಕ ಅಧ್ಯಕ್ಷ ಹುಸೇನ್‌ ಹೈಕಾಡಿ ವಂದಿಸಿದರು.

 

Exit mobile version