Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ತಾಲೂಕಿಗೆ ವಂಡ್ಸೆ ಹೋಬಳಿ ಸೇರಿಸುವುದಕ್ಕೆ ವಿರೋಧ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಹುಂಡೇಕರ್‌ ಸಮಿತಿ ವರದಿಯಲ್ಲಿ ದೊಡ್ಡ ತಾಲೂಕುಗಳಲ್ಲಿ ಸಂಪರ್ಕದ ವ್ಯವಸ್ಥೆಗಳು ಅಂದು ಕಡಿಮೆ ಇರುವ ಹಿನ್ನೆಲೆಯಲ್ಲಿ ಜನರಿಗೆ ಹತ್ತಿರದಲ್ಲೇ ಸೌಲಭ್ಯಗಳು ದೊರಕಲಿ ಎನ್ನುವ ಅಭಿವೃದ್ಧಿ ದೃಷ್ಟಿಕೋನದಲ್ಲಿ ಅಂತಹ ತಾಲೂಕನ್ನು ಒಡೆದು ಎರಡು ತಾಲೂಕನ್ನಾಗಿ ಮಾಡಬೇಕೆಂದು ಸೂಚಿಸಿದ್ದರು. ಆದರೆ ಈ ವರದಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ವಂಡ್ಸೆಯನ್ನು ತಾಲೂಕು ಕೇಂದ್ರವಾಗಿ ಮಾಡದಿದ್ದರೇ ಬೈಂದೂರು ತಾಲೂಕಿಗೆ ಸೇರಿಸುವುದು ಬೇಡ ಎಂದು ನ್ಯಾಯವಾದಿ ಟಿ.ಬಿ. ಶೆಟ್ಟಿ ಹೇಳಿದರು.

ಅವರು  ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ನಡೆದ ವಂಡ್ಸೆ ಹೋಬಳಿ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಹುಂಡೇಕರ್‌ ವರದಿಯಲ್ಲಿ ತಾಲೂಕು ಕೇಂದ್ರ ಎಲ್ಲಿ ಆಗಬೇಕೆಂಬ ಪ್ರಸ್ತಾಪ ಇಲ್ಲ. ಬೈಂದೂರು ತಾಲೂಕು ರಚನೆಯಾದಲ್ಲಿ ಬೈಂದೂರೇ ಕೇಂದ್ರವಾಗಬೇಕೆಂದು ವರದಿಯಲ್ಲಿ ಹೇಳಿಲ್ಲ. ಎ.ಬಿ. ಪ್ರಕಾಶ್‌ ಸಮಿತಿಯಲ್ಲಿದ್ದ ಚಿರಂಜೀವಿ ಸಿಂಗ್‌ ಕೂಡಾ ಮುಂದೆ ರಾ.ಹೆ.ಕೇಂದ್ರಿತ ತಾಲೂಕು ಕೇಂದ್ರಗಳಾಗಿ ಮಾಡುವುದು ಸರಿಯಲ್ಲ ಎಂದಿದ್ದರು. ಇದುವರೆಗೆ ಯಾವ ಸರಕಾರವೂ ಕೂಡ ತಾಲೂಕು ರಚನೆಗೆ ಸಂಬಂಧಿಸಿದ ಯಾವುದೇ ವರದಿಗೂ ಗೌರವ ಕೊಟ್ಟಿಲ್ಲ. ಆಡಳಿತ ಪಕ್ಷದ ಸ್ಥಳೀಯ ಶಾಸಕರು ಹೇಳಿದಂತೆ ತಾಲೂಕು ರಚನೆ ನಡೆಯುತ್ತಿದೆ ಹೊರತು ಜನರ ಅನುಕೂಲಕ್ಕೆ ನಡೆಯುತ್ತಿಲ್ಲ.

ಬೈಂದೂರು ಹೋಬಳಿಯನ್ನೇ ತಾಲೂಕು ಮಾಡುವುದಾದರೆ ಸ್ವಾಗತ. ವಂಡ್ಸೆ ಹೋಬಳಿಯನ್ನು ಸೇರಿಸಿದರೆ ಎಲ್ಲ ರೀತಿಯ ಹೋರಾಟ ನಡೆಸಲಾಗುವುದು ಎಂದು ನ್ಯಾಯವಾದಿ ಟಿ.ಬಿ. ಶೆಟ್ಟಿ ಹೇಳಿದರು.

ಸಭೆಯನ್ನುದ್ದೇಶಿಸಿ ತಲ್ಲೂರು ತಾ.ಪಂ. ಸದಸ್ಯ ಕರಣ್‌ ಕುಮಾರ್‌, ಬೈಂದೂರು ಬಿಜೆಪಿ ಬ್ಲಾಕ್‌ ಅಧ್ಯಕ್ಷ ಸದಾನಂದ, ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ, ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯಕುಮಾರ್‌ ಶೆಟ್ಟಿ , ಕೆರಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಬ್ಲಾಡಿ ನಾರಾಯಣ ಶೆಟ್ಟಿ, ಮಾಜಿ ತಾ.ಪಂ. ಸದಸ್ಯ ಟಿ.ಕೆ. ಕೋಟ್ಯಾನ್‌ ತಲ್ಲೂರು ಮಾತನಾಡಿದರು. ಸಭೆಯಲ್ಲಿ ವಂಡ್ಸೆ ಹೋಬಳಿಯನ್ನು ಬೈಂದೂರು ತಾಲೂಕಿಗೆ ಸೇರಿಸುವುದರ ಕುರಿತು ಕ್ಷೇತ್ರದ ಶಾಸಕರು ಮತ್ತು ಸರಕಾರ ಸ್ಪಷ್ಟ ನಿರ್ಧಾರ ಪ್ರಕಟಿಸದೇ ಇದ್ದಲ್ಲಿ ವಂಡ್ಸೆ ಹೋಬಳಿ ಮಟ್ಟದಲ್ಲಿ ಜನರ ಸಹಿ ಸಂಗ್ರಹ ಅಭಿಯಾನ, ಬಂದ್‌ ಆಚರಣೆ, ಪ್ರತಿಭಟನಾ ಸಭೆ ಹಾಗೂ ಮುಂದುವರಿದ ಭಾಗವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

 

Exit mobile version