Kundapra.com ಕುಂದಾಪ್ರ ಡಾಟ್ ಕಾಂ

ಆ್ಯಂಬುಲೆನ್ಸ್‌ ಢಿಕ್ಕಿ : ಪಾದಚಾರಿ ಕಾರ್ಮಿಕ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ
ತೆಕ್ಕಟ್ಟೆ : ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಸಮೀಪ ಆ್ಯಂಬುಲೆನ್ಸ್‌ ಢಿಕ್ಕಿಯಾಗಿ ಪಾಏಚಾರಿ ಸಾವಿಗೀಡಾದ ಘಟನೆ ಶನಿವಾರ ರಾತ್ರಿ ಗಂಟೆ 7.20ರ ಸುಮಾರಿಗೆ ಸಂಭವಿಸಿದೆ.
ಗುಳ್ವಾಡಿ ಹಂಚಿನ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕ ಗುಳ್ವಾಡಿಯ ನಿವಾಸಿ ಬಾಬು ನಾಯ್ಕ (52) ಮೃತಪಟ್ಟವರು.

ಗುಳ್ವಾಡಿ ಹಂಚಿನ ಕಾರ್ಖಾನೆಯಿಂದ ಕೆಲಸ ಮುಗಿಸಿ ತೆಕ್ಕಟ್ಟೆ ಪಟೇಲರ ಬೆಟ್ಟಿನಲ್ಲಿರುವ ಪತ್ನಿಯ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಮಂಗಳೂರಿನಿಂದ ಕುಂದಾಪುರದ ಕಡೆಗೆ ಅತೀ ವೇಗದಿಂದ ತೆರಳುತ್ತಿದ್ದ 407 ಆ್ಯಂಬುಲೆನ್ಸ್‌ ವಾಹನ ನೇರವಾಗಿ ಬಂದು ಪಾದಚಾರಿಗೆ ಢಿಕ್ಕಿ ಹೊಡೆಯಿತು.

ಅಪಘಾತದ ತೀವ್ರತೆಗೆ ಪಾದಚಾರಿಯ ತಲೆಯ ಭಾಗ ಸಂಪೂರ್ಣ ಛಿದ್ರಗೊಂಡಿದ್ದು ರಕ್ತದ ಮಡುವಿನಲ್ಲಿ ಆತ ಸ್ಥಳದಲ್ಲೇ ಸಾವಿಗೀಡಾದರು. ಹಲವು ವರ್ಷಗಳಿಂದಲೂ ಗುಳ್ವಾಡಿ ಹಂಚಿನ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ಗುಳ್ವಾಡಿಯ ನಿವಾಸಿ ಬಾಬು ನಾಯ್ಕ ಅವರು ವಾರದ ಕೊನೆಯ ದಿನವಾದ ಶನಿವಾರ ಪತ್ನಿಯ ಮನೆಗೆ ತೆರಳುತ್ತಿದ್ದರು.

ಅವರು ತನ್ನ ಹಿರಿಯ ಮಗಳ ಮದುವೆಯ ತಯಾರಿಯಲ್ಲಿದ್ದರು. ಆತ ಮನೆಯ ಆಧಾರ ಸ್ತಂಭವಾಗಿದ್ದರು ಎಂದು ಹೇಳಲಾಗಿದೆ. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಅಮಾನವೀಯತೆ ತೋರಿದ ಆ್ಯಂಬುಲೆನ್ಸ್‌ ಚಾಲಕ : ಮಂಗಳೂರಿನಿಂದ ಕುಂದಾಪುರದ ಕಡೆಗೆ ಖಾಲಿ ವಾಹನದಲ್ಲಿ ಸೈರನ್‌ ಹಾಕಿಕೊಂಡು ವೇಗದಿಂದ ತೆರಳುತ್ತಿದ್ದ 407 ಆ್ಯಂಬುಲೆನ್ಸ್‌ ವಾಹನ ಚಾಲಕ ಬಾಲಕೃಷ್ಣ ಪಾದಾಚಾರಿಗೆ
ಢಿಕ್ಕಿ ಹೊಡೆದು ರಾ.ಹೆ 66ರಲ್ಲಿ ರಕ್ತದ ಮಡುವಿನಲ್ಲಿಯೇ ಜೀವನ್ಮರಣದ ನಡುವೆ ಆಕ್ರಂದಿಸುತ್ತಿದ್ದರೂ ಕೂಡ ಆ್ಯಂಬುಲೆನ್ಸ್‌ ವಾಹನವನ್ನು ನಿಲ್ಲಿಸದೆ ಪರಾರಿಯಾಗಿ ಅಮಾನವೀಯತೆ ತೋರಿರುವ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿದೆ.

ಸ್ಥಳೀಯರ ಸ್ಪಂದನ: ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಸಾರ್ವ ಜನಿಕರು ರಾ.ಹೆ. 66ರಲ್ಲಿ ಸಂಚರಿಸುವ ವಾಹನಗಳ ನಿಯಂತ್ರಣ ಹಾಗೂ ಸಂಬಂಧಪಟ್ಟ ಪೊಲೀಸ್‌ ಇಲಾಖೆಗಳಿಗೆ ಮಾಹಿತಿ ನೀಡಿದ್ದಾರೆ . ಸಾರ್ವಜನಿಕರು ನೀಡಿದ ಮಾಹಿತಿಯ ಆಧಾರದಲ್ಲಿ ಪರಾರಿಯಾದ ಆ್ಯಂಬುಲೆನ್ಸನ್ನು ಚಾಲಕ ಸಹಿತ ಕುಂದಾಪುರದಲ್ಲಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.

ಕೋಟ ಠಾಣಾಧಿಕಾರಿ ರಾಜಗೋಪಾಲ್‌, ಹೆಡ್‌ಕಾನ್‌ಸ್ಟೆಬಲ್‌ ಪ್ರದೀಪ್‌ ನಾಯಕ್‌, ಸಿಬಂದಿ ಸತೀಶ್‌ ಹಂದಾಡಿ, ವಿಶ್ವನಾಥ ಖಾರ್ವಿ, ಪ್ರಶಾಂತ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

 

Exit mobile version