ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಸೊಗಡು, ಕುಂದಗನ್ನಡದ ಕಂಪಿನೊಂದಿಗೆ ಜಾತಿ ಹಾಗೂ ಮೀಸಲಾತಿ ಹಿಂದಿನ ತಲ್ಲಣಗಳನ್ನು ತೆರೆಯ ಮೇಲೆ ಕಟ್ಟಿಕೊಟ್ಟ ’ರಿಸರ್ವೇಶನ್’ ಚಿತ್ರಕ್ಕೆ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಗಿದ್ದು, ಅತ್ಯುತ್ತಮ ಕನ್ನಡ (ಪ್ರಾದೇಶಿಕ) ಚಿತ್ರ ಪ್ರಶಸ್ತಿ ದೊರೆತಿದೆ.
ಜಾತಿ ಹಾಗೂ ಮೀಸಲಾತಿ ವ್ಯವಸ್ಥೆಯು ಮಧ್ಯಮ ವರ್ಗದ ಕುಟುಂಬದ ಮೇಲೆ ಬೀರಬಹುದಾದ ಪ್ರಭಾವ – ತಲ್ಲಣಗಳು ಹಾಗೂ ಅದರಾಚೆಗಿನ ಪರಿಣಾಮವನ್ನು ಕಥಾವಸ್ತುವಾಗಿಸಿಕೊಂಡ ’ರಿಸರ್ವೆಶನ್’ ಕಲಾತ್ಮಕ ಚಿತ್ರವನ್ನು ಖ್ಯಾತ ನಿರ್ದೇಶಕ ನಿಖಿಲ್ ಮಂಜು ನಿರ್ದೇಶಿಸಿದ್ದರು. ಗುಲ್ವಾಡಿ ಟಾಕೀಸ್ ಬ್ಯಾನರ್‌ನಲ್ಲಿ ನಟ, ಸಾಹಿತಿ ಯಾಕೂಬ್ ಖಾದರ್ ಗುಲ್ವಾಡಿ ಚಿತ್ರ ನಿರ್ಮಾಣ ಮಾಡಿದ್ದರು. ಶ್ರೀಲಲಿತೆ ಅವರ ಕಥೆಯನ್ನಾಧರಿಸಿದ ಚಿತ್ರಕ್ಕೆ ಬಿ. ಶಿವಾನಂದ್ ಸಂಭಾಷಣೆ ಬರೆದಿದ್ದರೇ, ಪ್ರದೀಪ್ ಶೆಟ್ಟಿ ಕೆಂಚನೂರು, ನಿಖಿಲ್ ಮಂಜು ಹಾಗೂ ಬಿ. ಶಿವಾನಂದ ಚಿತ್ರಕಥೆ ಬರೆದಿದಾರೆ. ಪಿವಿಆರ್ ಸ್ವಾಮಿ ಅವರ ಛಾಯಾಗ್ರಹಣ, ಸಮೀರ್ ಅವರ ಸಂಗೀತದಲ್ಲಿ ಮಾನಸಿ ಸುಧೀರ್ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿರುವ ಬಗ್ಗೆ ಚಿತ್ರ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ಪ್ರತಿಕ್ರಿಯಿಸಿ, ಚಿತ್ರಗಳಲ್ಲಿ ನಟನೆ ಹಾಗೂ ದೇಶ ವಿದೇಶ ಸುತ್ತಿ ಜನಜೀವನವನ್ನು ಅರಿತ ಬಳಿಕ ಕಲಾತ್ಮಕ ಚಿತ್ರಗಳನ್ನು ಮಾಡಬೇಕು ಎನ್ನುವ ಆಸೆಯನ್ನು ನಿರ್ದೇಶಕ ನಿಖಿಲ್ ಮಂಜೂ ಹಾಗೂ ಉತ್ತಮ ತಂಡದ ಮೂಲಕ ಸಾಕಾರಗೊಳಿಸಲಾಗಿತ್ತು. ದುಡ್ಡು ಹೊಂದಿಸಿಕೊಂಡು ಸೀಮಿತ ಬಜೆಟ್‌ನಲ್ಲಿ ತಯಾರಿಸಲಾಗಿದ್ದ ಮೊದಲ ಚಿತ್ರಕ್ಕೆ ಪ್ರಶಸ್ತಿ ಬಂದಿರುವುದು ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಿದೆ. ಇದರ ಹಿಂದೆ ಹಲವರ ಶ್ರಮವಿದೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/
► ಇದನ್ನೂ ಓದಿ: ಗುಲ್ವಾಡಿ ಟಾಕೀಸ್ ನಿರ್ಮಾಣದ ‘ರಿಸರ್ವೆಶನ್’ ಚಿತ್ರ ಮುಹೂರ್ತ, ಚಿತ್ರೀಕರಣಕ್ಕೆ ಚಾಲನೆ – http://kundapraa.com/?p=18420