Kundapra.com ಕುಂದಾಪ್ರ ಡಾಟ್ ಕಾಂ

ಆದರ್ಶಗ್ರಾಮ ಯೋಜನೆ: ಶಿರೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

 

 

 

ಬೈಂದೂರು: ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಶಿರೂರು ಗ್ರಾಮವನ್ನು ದತ್ತು ತೆಗೆದುಕೊಂಡು ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸತತವಾಗಿ ಕೆಲಸ ಮಾಡಲಾಗಿದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು.

ಅವರು ಶಿರೂರು ಗ್ರೀನ್ ವ್ಯಾಲಿ ನ್ಯಾಶನಲ್ ಸ್ಕೂಲ್ ಸಭಾಂಗಣದಲ್ಲಿ ಸಂಸದರ ಆದರ್ಶಗ್ರಾಮ ಯೋಜನೆಯಡಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಸಂಬಂಧ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಪ್ರಧಾನಮಂತ್ರಿಗಳ ಆದರ್ಶಗ್ರಾಮ ಯೋಜನೆಯಂತೆ ಉಡುಪಿ ಜಿಲ್ಲೆಯ ತುದಿಯಲ್ಲಿರುವ ಗ್ರಾಮವಾದ ಶಿರೂರನ್ನು ಆಯ್ಕೆಮಾಡಿಕೊಳ್ಳಲಾಗಿತ್ತು. ಗ್ರಾಮದಲ್ಲಿ ರಸ್ತೆ, ಸೇತುವೆ, ಕುಡಿಯುವ ನೀರು, ಆಸ್ಪತ್ರೆಯ ಅಭಿವೃದ್ಧಿ ಮುಂತಾದ ಮೂಲಭೂತ ಸೌಕರ್ಯಗಳನ್ನು ಶಿರ್ಘ ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ. ಖಾಸಗಿ ಕ್ಷೇತ್ರದ ವ್ಯಕ್ತಿಗಳು ಊರಿನ ಏಳಿಗೆಗೆ ಪಣತೊಟ್ಟಿರುವುದರಿಂದ ಈ ಭಾಗದ ಜನಪ್ರತಿನಿಧಿಗಳೂ ಕೈಜೋಡಿಸಿ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದರು.

ಬಳಿಕ ಬೈಂದೂರು ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ಮಾತನಾಡಿ ಸಂದಸರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ 32ಲಕ್ಷ ವೆಚ್ಚದ ಸೇತುವೆ, 10ಲಕ್ಷ ವೆಚ್ಚದ ಪೇಟೆ ಕೇರಿ ರಸ್ತೆ, 5ಕೋಟಿ ವೆಚ್ಚದಲ್ಲಿ ದೊಂಬೆಯಲ್ಲಿ ಸಮುದ್ರ ತಡೆಗೋಡೆ, 94ಲಕ್ಷ ರೂ. ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆ ರಸ್ತೆ ಕಾಮಗಾರಿ, 12ಲಕ್ಷ ವೆಚ್ಚದಲ್ಲಿ ಕೋಣನಮಕ್ಕಿ ರಸ್ತೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮುಂತಾದ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೆಲವು ಕಾಮಗಾರಿಗಳು ಪೂರ್ಣಗೊಂಡಿದೆ, ಕೆಲವು ಕಾಮಗಾರಿಗಳಿಗೆ ಚಾಲನೆ ನೀಡಬೇಕಿದೆ ಎಂದರು.
ಶಿರೂರು ಬಹುದೊಡ್ಡ ಗ್ರಾಮ ಪಂಚಾಯತ್ ಆಗಿರುವುದರಿಂದ ಆಡಳಿತ ಹಾಗೂ ಅಭಿವೃದ್ಧಿಯ ಹಿತದೃಷ್ಟಿಯಿಂದ ಶಿರೂರು 1 ಹಾಗೂ ಶಿರೂರು 2 ರಂದು ಎರಡು ಭಾಗಗಳನ್ನಾಗಿ ಪರಿವರ್ತಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸರಕಾರದ ಪಂಚಾಯತ್ ರಾಜ್ ಸಚಿವ ಹೆಚ್. ಕೆ. ಪಾಟೀಲ್, ಅರಣ್ಯ ಸಚಿವ ರಮಾನಾಥ ರೈ, ಬಂದರು ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್, ಪಶಸಂಗೋಪನಾ ಸಚಿವ ಟಿ. ಬಿ. ಜಯಚಂದ್ರ, ಜಿಲ್ಲಾ ಉಸ್ತುವಾರಿ ಸಚಿವ ವಿಜಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ, ಶಿರೂರು ವೆಲ್ಫೇರ್ ಟ್ರಸ್ಟ್ ನ ಸೈಯದ್ ಅಬ್ದುಲ್ ಖಾದರ್ ಬಾಶು, ಕಾಂಗ್ರೆಸ್ ಮುಖಂಡ ಎಂ. ಎ. ಗಪೂರ್ ಮೊದಲಾದವರು ಉಪಸ್ಥಿತರಿದ್ದರು.

Exit mobile version