Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಸಾರ್ವಜನಿಕರಿಂದ ನೂತನ ತಾಲೂಕು ರಚನೆಯ ಸಂಭ್ರಮಾಚರಣೆ

ತಾಲೂಕು ರಚನೆಯಲ್ಲಿ ಅನುಮಾನ ಬೇಡ. ಅಭಿವೃದ್ಧಿಗೆ ಮೊದಲ ಆದ್ಯತೆ: ಶಾಸಕ ಕೆ. ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಜನರ ಬಹುಕಾಲದ ಬೇಡಿಕೆಯಾಗಿದ್ದ ತಾಲೂಕು ರಚನೆಯ ಕನಸು ಈಡೇರಿದ್ದು, ತಾಲೂಕು ಕೇಂದ್ರವಾಗಲು ಅಗತ್ಯವಿರುವ ಕಛೇರಿಗಳನ್ನು ಶೀಘ್ರ ಕಾರ್ಯಾರಂಭವಾಗುವಂತೆ ನೋಡಿಕೊಳ್ಳಲಾಗುವುದು. ಬೈಂದೂರು ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರಂತರವಾಗಿ ಶ್ರಮಿಸಿದ್ದು ಮಾದರಿ ತಾಲೂಕನ್ನಾಗಿ ರೂಪಿಸುವಲ್ಲಿ ಎಲ್ಲರೂ ಶ್ರಮವಹಿಸಬೇಕಿದೆ ಎಂದು ಬೈಂದೂರು ಶಾಸಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ಬೈಂದೂರು ತಾಲೂಕು ರಚನೆ, ಅನುಷ್ಠಾನ ಮತ್ತು ಅಭಿವೃದ್ಧಿ ಸಮಿತಿ ಹಾಗೂ ಸಾರ್ವಜನಿಕರು ಆಯೋಜಿಸಿದ್ದ ನೂತನ ತಾಲೂಕು ರಚನೆಯ ಸಂಭ್ರಮಾಚರಣೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬೈಂದೂರಿನ ಹಲವು ನಾಯಕರ ನಿರಂತರ ಹೋರಾಟ ತಾಲೂಕಾಗುವಲ್ಲಿ ಪ್ರಮುಖ ಪಾತ್ರವಹಿಸಿದೆ. ಘೋಷಿತ ತಾಲೂಕು ಅನುಷ್ಠಾನದ ಬಗ್ಗೆ ಯಾರಿಗೂ ಸಂದೇಹ ಬೇಡ. ಈಗಾಗಲೇ ಬೈಂದೂರಿನಲ್ಲಿ ತಾಲೂಕು ಕೇಂದ್ರಕ್ಕೆ ಅಗತ್ಯವಾದ ಬಹುತೇಕ ಕಛೇರಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ನ್ಯಾಯಾಲಯ ಹಾಗೂ ತಾಲೂಕು ಪಂಚಾಯತ್ ತುರ್ತು ಆರಂಭವಾಗಬೇಖಿದೆ. ತಾತ್ಕಲಿಕವಾಗಿ ಬಾಡಿಗೆ ಕಟ್ಟಡದಲ್ಲಾದರೂ ಆರಂಭಿಸಿ ಇನ್ನೆರಡು ತಿಂಗಳಲ್ಲಿ ಆರಂಭಿಸಿ ತಾಲೂಕಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ತೊಡಗಿಕೊಳ್ಳಲಾಗುವುದು ಎಂದರು.

ತಾಲೂಕು ಕೇಂದ್ರ ಗೊಂದಲ ಸಲ್ಲದು:
ಬೈಂದೂರು ತಾಲೂಕು ಘೋಷಣೆಯಾದ ಬಳಿಕ ಕ್ಷೇತ್ರ ವ್ಯಾಪ್ತಿಯಲ್ಲಿ ಗೊಂದಲ ಮೂಡಿಸುವ ಕೆಲಸವಾಗುತ್ತಿರುವುದು ವಿಷಾದನೀಯ. ೨೦೧೩ರಲ್ಲಿ ಕುಂದಾಪುರ ತಾಲೂಕಿನ ಚಕ್ರ ನದಿಯ ಉತ್ತರ ಭಾಗದಲ್ಲಿರುವ ಪ್ರದೇಶವನ್ನು ಬೈಂದೂರು ತಾಲೂಕಿಗೆ ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ. ಆದರೆ ಈಗ ಕೆಲವರು ತಾಲೂಕು ಕೇಂದ್ರವನ್ನು ಸ್ಥಳಾಂತರಿಸುವ ಬಗ್ಗೆ ಒತ್ತಡ ಹೇರುವ ಮೂಲಕ ದಂದ್ವ ನೀತಿ ಅನುಸರಿಸುತ್ತಿದ್ದಾರೆ. ಇದು ಸರಿಯಲ್ಲ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಅಭಿವೃದ್ಧಿಗಾಗಿ ಅನುದಾನ ಮೀಸಲು:
ಮರವಂತೆಯಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕಾಗಿ ೧೦೨ ಕೋಟಿ, ಉಪ್ಪುಂದ ಮಡಿಕಲ್‌ನಲ್ಲಿ ೯೮ ಕೋಟಿ ರೂ ವೆಚ್ಚದ ಹೊರ ಬಂದರು, ಕ್ಷೇತ್ರ ವ್ಯಾಪ್ತಿಯ ರಸ್ತೆ ದುರಸ್ತಿಗಾಗಿ ೧೦ ಕೋಟಿ ರೂ. ಅನುದಾನ ಮಂಜೂರಾತಿ ಹಂತದಲ್ಲಿದೆ ಎಂದ ಅವರು ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರವನ್ನು ೧೦೦ ಬೆಡ್‌ನ ತಾಲೂಕು ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ೩೩ ಕೋಟಿ ರೂ. ಅಲ್ಲದೇ ೩೦ ಕೋಟಿ ರೂ. ವೆಚ್ಚದಲ್ಲಿ ಶಿರೂರಿನಲ್ಲಿ ಉಪ್ಪು ನೀರನ್ನು, ಕುಡಿಯುವ ನೀರನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ. ಬೈಂದೂರಿನಲ್ಲಿ ೩೦ ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಶೈಲಿಯ ಕೆಎಸ್‌ಆರ್‌ಟಿಸಿ ನಿಲ್ದಾಣ ಹಾಗೂ ಡಿಪೋ ನಿರ್ಮಾಣ ಮಾಡಲಾಗುವುದು ಎಂದರು.

ತಾಲೂಕು ರಚನೆ ಮತ್ತು ಅಭಿವೃದ್ಧಿ ಅಮಿತಿಯ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಸ್. ಜನಾರ್ದನ ಅಭಿನಂದನಾ ನುಡಿಗಳನ್ನಾಡಿದರು. ಬೈಂದೂರಿನ ನಾನಾ ಸಂಘ ಸಂಸ್ಥೆಯ ಮುಖಂಡರಾದ ವೆಂಕಟೇಶ ಕಿಣಿ, ಜಯಾನಂದ ಹೋಬಳಿದಾರ್ ರಿಯಾಜ್ ಅಹಮದ್, ರೇ. ಫಾ. ಮಿರಾಂದ, ಜಗದೀಶ ಪಟವಾಲ್ ಮಾರ್ಟಿನ್ ಡಯಾಸ್, ಡಾ. ವೆಂಕಟೇಶ, ವಸಂತ ಹೆಗ್ಡೆ, ಮಂಜುನಾಥ ಶೆಟ್ಟಿ, ಶಿವರಾಮ ಕೊಠಾರಿ, ಲಕ್ಷ್ಮಣ, ಗಣೇಶ ಕಾರಂತ, ಗಣಪತಿ ಹೋಬಳಿದಾರ್, ಗೀತಾ ಸುರೇಶ, ಆಶಾ ಕಿಶೋರ್ ಮತ್ತಿತರರು ಉಪಸ್ಥಿತರಿದ್ದರು. ಗೋವಿಂದ ಎಂ. ಸ್ವಾಗತಿಸಿ ಅರುಣಕುಮಾರ ಶಿರೂರು ನಿರೂಪಿಸಿದರು/ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version